ಬಸವಕಲ್ಯಾಣ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಅಕ್ಸಿಜನ್, ಇಂಜೆಕ್ಷನ್ ಸೇರಿದಂತೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಭಗವಂತ ಖೂಬಾ ಸೂಚಿಸಿದ್ದಾರೆ.
ನಗರದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದ ಬಳಿಕ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿದ ಅವರು, ಅಸ್ಪತ್ರೆಯಲ್ಲಿ ಲಭ್ಯವಿರುವ ಕೋವಿಡ್ ಬೆಡ್, ಆಕ್ಸಿಜನ್, ಔಷಧಗಳ ಬಗ್ಗೆ ಪ್ರತಿದಿನ ಹೊರಗಡೆ ಬೋರ್ಡ್ ಮೇಲೆ ಬರೆಯಬೇಕು. ಇದರಿಂದ ರೋಗಿಗಳಿಗೆ ಧೈರ್ಯ ಬರುತ್ತದೆ ಎಂದು ಸಲಹೆ ನೀಡಿದರು.
ಸೋಂಕಿತರಿಗೆ ನಿಮ್ಮಲ್ಲಿಯೇ ಚಿಕಿತ್ಸೆ ನೀಡಿ, ಬೇರೆ ಆಸ್ಪತ್ರೆಗೆ ರೆಫರ್ ಮಾಡಬೇಡಿ. ಕೊರೊನಾ ಮಹಾಮಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ. ಖಾಸಗಿಯಲ್ಲಿ ಬಡವರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚು. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು. ಏನಾದರೂ ಅವಶ್ಯಕತೆ ಇದ್ದಲ್ಲಿ ನನಗೆ ಕರೆ ಮಾಡಿದರೆ ಸಹಾಯ ಮಾಡಲಾಗುವುದು ಎಂದು ವೈದ್ಯರಿಗೆ ತಿಳಿಸಿದರು.
ಇದನ್ನೂ ಓದಿ : ಮೊದಲು ಜೀವ ಭದ್ರತೆ, ನಂತರ ಜೀವನದ ಭದ್ರತೆ ; ಕೋವಿಡ್ ತಡೆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ.. ಸುಧಾಕರ್
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಲಸಿಕೆಯನ್ನು ತಾಲೂಕಿನ ಎಲ್ಲಾ ಹಳ್ಳಿಗಳ ಜನರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಲಸಿಕೆ ಬಗ್ಗೆ ಜನರಲ್ಲಿ ಇರುವ ಆತಂಕ ದೂರ ಮಾಡಿ, ಅದರಿಂದ ಸಿಗುವ ಲಾಭದ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು. ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಗಳು ಆದ್ಯತೆ ಮೇರೆಗೆ ನೀಡಿಬೇಕು ಎಂದು ಸೂಚಿಸಿದರು.
ಕೋವಿಡ್ ಬಂದರೆ ಯಾರು ಹೆದರುವ ಅಗತ್ಯವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಸಿ, 3 ಗಜಗಳ ಅಂತರ ಕಾಪಾಡಿಕೊಳ್ಳಿ. ನಿಮ್ಮ ಮನೆಯ ಸಣ್ಣ ಪುಟ್ಟ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ. ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ, ಸುತ್ತ ಮುತ್ತಲಿನ ಜನರಿಗೂ ಈ ಬಗ್ಗೆ ಜಾಗೃತಿ ಮೂಡಿಸಿ. ಎಲ್ಲರೂ ಒಗ್ಗಟ್ಟಾಗಿ ಕೋವಿಡ್ ವಿರುದ್ಧ ಹೋರಾಡುವ ಎಂದು ಸಂಸದ ಖೂಬಾ ಸಾರ್ವಜನಿಕರಿಗೆ ಮನವಿ ಮಾಡಿದರು.