ಬಸವಕಲ್ಯಾಣ: ಸರ್ಕಾರದ ಆದೇಶ ಹಿನ್ನೆಲೆ ಮುಂಬೈ, ಪುಣೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ 500ಕ್ಕೂ ವಲಸೆ ಕಾರ್ಮಿಕರನ್ನು ತಾಲೂಕಿನ ಚಂಡಕಾಪೂರ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಮೂರು ದಿನಗಳಿಂದ ನೂರಾರು ಮಂದಿ ರಾಜ್ಯಕ್ಕೆ ಬರುತ್ತಿದ್ದಾರೆ. ಗಡಿ ಪ್ರವೇಶಿಸುವ ಪ್ರತಿಯೊಬ್ಬರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಶುಕ್ರವಾರ 173, ಶನಿವಾರ 240, ಭಾನುವಾರ 500ಕ್ಕೂ ಹೆಚ್ಚು ಕಾರ್ಮಿಕರು ರಾಜ್ಯದ ಗಡಿ ದಾಟಿದ್ದಾರೆ.
ಬೇರೆ ಜಿಲ್ಲೆಯ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರಲ್ಲಿ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಚೆಕ್‌ಪೋಸ್ಟ್ ಬಳಿಗೆ ಹೋದರೆ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸುತ್ತಾರೆ ಎಂಬ ಭಯದಿಂದ ಕೆಲವರು ಗಡಿಗೆ ತಲುಪುವ ಮುನ್ನವೇ ಮಾರ್ಗ ಮಧ್ಯ ವಾಹನಗಳಿಂದ ಇಳಿದು ಕಾಲ್ನಡಿಗೆ ಮೂಲಕ ಮನೆ ಸೇರುತ್ತಿದ್ದಾರೆ.
ಆದರೆ, ಗ್ರಾಮಕ್ಕೆ ಹೊಸದಾಗಿ ಬಂದವರ ಕುರಿತು ಸ್ಥಳೀಯ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ಪಡೆಯುತ್ತಿದ್ದಾರೆ. ಹೊಸದಾಗಿ ಬಂದವರ ಮಾಹಿತಿ ತಿಳಿದು ಬಂದರೆ ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸುತ್ತಿದ್ದಾರೆ.