ಬೀದರ್: ಕಳೆದ ನಾಲ್ಕೈದು ವರ್ಷದಿಂದ ಬೀದರ್ ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಇಲ್ಲಿನ ರೈತರು ಹೈರಾಣಾಗಿದ್ದರು. ಈ ವರ್ಷ ಮಳೆ ಉತ್ತಮವಾಗಿ ಆಗಿದ್ದು, ಹೊಲಗಳಲ್ಲಿ ಬೆಳೆ ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಆದರೆ ಬೆಳೆಗಳಿಗೆ ಕೋತಿಗಳ ಕಾಟ ಜಾಸ್ತಿಯಾಗಿದ್ದು ರೈತರನ್ನು ಕಂಗಾಲಾಗಿಸಿದೆ.
ಹೆಸರು, ಉದ್ದು, ಸೋಯಾಬಿನ್ ಬೆಳೆಯ ಫಸಲು ಚೆನ್ನಾಗಿ ಬಂದಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ. ಆದ್ರೆ ಮಂಗಗಳ ಕಾಟದಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಉದ್ದು, ಹೆಸರು ಹೊಲಕ್ಕೆ ಗುಂಪಾಗಿ ದಾಳಿ ಮಾಡೋ ಕಪಿಗಳು, ಬೆಳೆಯನ್ನು ತಿಂದು ತೇಗಿ ಜಾಗ ಖಾಲಿ ಮಾಡುತ್ತಿವೆ. ದಿನಬೆಳಗಾದರೆ ಕೋತಿಗಳ ಕಾಟ, ರಾತ್ರಿಯಾದರೆ ಜಿಂಕೆಗಳ ಕಾಟ. ಅಲ್ಲದೆ ಈ ಮಂಗಗಳನ್ನ ಓಡಿಸಲು ಹೋಗಿ ರೈತನೊಬ್ಬ ಪ್ರಾಣವನ್ನೂ ಕಳೆದುಕೊಂಡಿದ್ದಾನೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪರಗಾ ಗ್ರಾಮದಲ್ಲಂತೂ ಕೋತಿಗಳ ಹಾವಳಿಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಈ ಗ್ರಾಮದ ಸುತ್ತಮುತ್ತ ಏನಿಲ್ಲ ಅಂದರೂ, 200ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಂಗಗಳು, ಗ್ರಾಮದ ಹೊಲದಲ್ಲಿ ಹಾಕಿದ ಬೆಳೆಯನ್ನೆಲ್ಲಾ ತಿಂದು ನಾಶಮಾಡುತ್ತಿವೆ. ಈ ವರ್ಷ ಉತ್ತಮವಾಗಿ ಮಳೆಯಾಗಿರೋದ್ರಿಂದ ಬೆಳೆ ಚನ್ನಾಗಿ ಬಂದಿದೆ. ಆದರೆ ಕಪಿಗಳು ಮತ್ತು ಜಿಂಕೆಗಳ ಕಾಟ ಜಾಸ್ತಿಯಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಹೊಲಕ್ಕೆ ಹೋದ್ರೆ ಸಾಕು ಮಂಗಗಳನ್ನು ಓಡಿಸುವುದೇ ಕೆಲಸವಾಗಿ ಬಿಟ್ಟಿದೆ ಅಂತಾರೆ ರೈತರು.
ಒಟ್ಟಾರೆ ಗಡಿ ಜಿಲ್ಲೆಯ ರೈತರ ಹೊಲದಲ್ಲಿ ಈಗ ಮಂಗಗಳದ್ದೇ ಕಾರುಬಾರು. ಮಂಗಗಳ ತುಂಟಾಟಕ್ಕೆ ರೈತರು ಸುಸ್ತಾಗಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ಹೊಲಕ್ಕೆ ಬಂದು ಹೋಗೋ ವಾನರ ಸೇನೆ ಹಾಗೂ ಜಿಂಕೆಗಳು ರೈತರ ಬಂಪರ್ ಬೆಳೆಯ ಆಸೆಗೆ ತಣ್ಣೀರೆರಚಿವೆ.