ಬಸವಕಲ್ಯಾಣ (ಬೀದರ್): ಜೆಡಿಎಸ್ ಪಕ್ಷ ಹಾಗೂ ಪಕ್ಷದ ವರಿಷ್ಠರ ಮೇಲೆ ಕಾಂಗ್ರೆಸ್ ಮುಖಂಡರು ಪದೆ ಪದೇ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು, ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದವರ ದಾಖಲೆ ಸಹಿತ ಬೀದಿಗೆ ಎಳೆದು ತಂದು ನಿಲ್ಲಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಜಫ್ರುಲ್ಲಾ ಖಾನ್ ಎಚ್ಚರಿಕೆ ನೀಡಿದ್ದಾರೆ.
ಜಮೀರ್ ಅಹ್ಮದ್ ಖಾನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರು ಪದೇ ಪದೆ ನಮ್ಮ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದು ನೋವು ತರುತ್ತಿದೆ. ಕಾಂಗ್ರೆಸ್ ಮುಖಂಡರು ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಕೆಟ್ಟದಾಗಿ ಮಾತನಾಡುವವರು ತಮ್ಮ ಸಂಸ್ಕೃತಿ ಬಿಂಬಿಸಿಕೊಳ್ಳುತಿದ್ದಾರೆ. ನಮ್ಮ ಬಾಯಲ್ಲೂ ನಾಲಿಗೆ ಇದೆ, ನಮಗೂ ಅವರ ಹಾಗೇ ಮಾತನಾಡಲು ಬರುತ್ತದೆ ಅನ್ನೊದು ತಿಳಿದುಕೊಳ್ಳಬೇಕು ಎಂದರು.
ಜೆಡಿಎಸ್ ಪಕ್ಷ ಬಿಜೆಪಿ ಪಕ್ಷದ ಬಿ ಟಿಮ್ ಎಂದು ಆರೋಪಿಸುವವರು ಮುಸ್ಲಿಮರ ವಿರುದ್ಧ ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌ಸಿ ಕಾನೂನುಗಳನ್ನು ಜಾರಿಗೆ ತರುತ್ತಿರುವಾಗ ವಿಪಕ್ಷ ಸ್ಥಾನದಲ್ಲಿ ಇದ್ದ ಕಾಂಗ್ರೆಸ್ ಏನು ಮಾಡುತ್ತಿತ್ತು.? ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವಾಗ ಕಾಂಗ್ರೆಸ್ ಪಕ್ಷ ಏನು ಮಾಡಿತ್ತು? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಕರಿಯಾ ಅಂತ ಹೇಳುತ್ತಿರುವ ಜಮೀರ್ ಅಹ್ಮದ್ ಖಾನ್ ಭಾರತೀಯ ಜನರ ಬಗ್ಗೆ ಇತಿಹಾಸ ಮೊದಲು ಅರಿತುಕೊಳ್ಳಬೇಕು. ಭಾರತೀಯರು ಮೂಲತಃ ಕರಿಯರೇ ಆಗಿದ್ದಾರೆ, ಹೀಗಾಗಿ ಕರಿಯರ ಬಗ್ಗೆ ಗೌರವ ಹೊಂದಬೇಕು ಎಂದರು.
ಜಮೀರ್ಗೆ ಬಹಿರಂಗ ಸವಾಲು
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಅಲ್ಲಾಹುವಿನ (ದೇವರ) ಮೇಲೆ ಪ್ರಮಾಣ ಮಾಡಿ ಹೇಳಿದ್ದಾರೆ. ಹಣ ಪಡೆದಿರುವ ಬಗ್ಗೆ ಖಚಿತ ಮಾಹಿತಿ ಇದ್ದರೆ ಜಮೀರ್ ಖಾನ್ ಅವರು ಕೂಡ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದರು. ಜೆಡಿಎಸ್ ಪಕ್ಷದಲ್ಲಿ ಮುಸ್ಲಿಮರಿಗೆ ಹಿಂದಿನಿಂದಲೂ ಸಾಕಷ್ಟು ಅವಕಾಶ ನೀಡಲಾಗಿದೆ. ಜೆಡಿಎಸ್ ಪಕ್ಷದ ಪ್ರಾಬಲ್ಯ ಹೊಂದಿರುವ ಬಸವಕಲ್ಯಾಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಮುಸ್ಲಿಮರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಕಲ್ಪಿಸಲಾಗಿದೆಯೇ ವಿನಃ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದರು.