ಬೀದರ್ : ರಾಜ್ಯದ ಗಡಿ ಸಮುದಾಯದ ಆರೋಗ್ಯ ಕೇಂದ್ರದಲ್ಲಿನ ಕೊರೊನಾ ವಾರ್ಡ್ನ ಚಿಕಿತ್ಸಾ ಸೌಲಭ್ಯ ಇದೀಗ ಮಹಾರಾಷ್ಟ್ರದಲ್ಲಿಯೂ ಚರ್ಚೆಯಾಗುತ್ತಿದೆ. ಇಲ್ಲಿ ನೀಡುತ್ತಿರುವ ಸೌಲಭ್ಯ ನೆರೆಯ ಮಹಾರಾಷ್ಟ್ರದ ಜನರು ಮೂಗು ಮುರಿಯುವಂತೆ ಮಾಡಿದೆ. ಸೋಂಕಿತರಿಗಾಗಿ ಹೈಟೆಕ್ ಸೌಲಭ್ಯ, ಉಚಿತ ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಯ ವೈದ್ಯರ ಸತತ ಪರಿಶ್ರಮ... ಈ ಎಲ್ಲ ಕೀರ್ತಿ ನೆರೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಸುಸಜ್ಜಿತ ಆಸ್ಪತ್ರೆ ಕಟ್ಟಡ, ಮನರಂಜನೆಗಾಗಿ ಟಿವಿ, ಆಕ್ಸಿಜನ್ ಪೈಪ್ಲೈನ್ ಸೇರಿದಂತೆ ಕಾಲಕಾಲಕ್ಕೆ ಊಟ-ತಿಂಡಿ, ವಿಶೇಷ ವಾರ್ಡ್ಗೆ 24x7 ವೈದ್ಯ ಸಿಬ್ಬಂದಿ ನೇಮಕ ಹೀಗೆ... ಹಲವು ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆಯ ಕಮಲನಗರದ ಸಮುದಾಯ ಆರೋಗ್ಯ ಕೇಂದ್ರ ಈಗ ಗಮನ ಸೆಳೆದಿದೆ.
ಮಹಾರಾಷ್ಟ್ರ ಗಡಿಯಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಈ ಆಸ್ಪತ್ರೆಯಲ್ಲಿ ಕಳೆದ ಐದು ತಿಂಗಳಿಂದ ಸಿಬ್ಬಂದಿಯ ಸತತ ಪರಿಶ್ರಮ, ವೈದ್ಯರ ಆರೈಕೆಯಿಂದ ಈಗ ಮಾದರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಎಂಟ್ರಿ ಕೊಡುವ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಿ ನಂತರ ವಿವಿಧ ಕ್ವಾರಂಟೈನ್ ಸೆಂಟರ್ನಲ್ಲಿಟ್ಟು ಎಲ್ಲರ ಗಂಟಲು ಮಾದರಿ ದ್ರವ ತಪಾಸಣೆ ನಡೆಸಿ ಸೋಂಕಿತರನ್ನು ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡುವ ಮೂಲಕ ಸವಾಲಿನ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 48 ಜನ ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಈ ಪೈಕಿ 44 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಸಾವಿನ ಸಂಖ್ಯೆ ಇಲ್ಲದಿರುವುದು ಮತ್ತು ಸಾವಿರಾರು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು ಗಮನಾರ್ಹವಲ್ಲದೆ ಮತ್ತೇನು?
ಕಳೆದ ಮೂರು ವರ್ಷಗಳಿಂದ ಸತತ 'ಕಾಯಕಲ್ಪ' ಎಂಬ ಪ್ರಶಸ್ತಿಯನ್ನು ಪಡೆದಿರುವ ಈ ಸರ್ಕಾರಿ ಆಸ್ಪತ್ರೆ, ಕೊರೊನಾದಲ್ಲೂ ವಿಶೇಷ ಸಾಧನೆ ಮಾಡಿರುವುದು ಮತ್ತಷ್ಟು ಉತ್ಸಾಹ ಬರುವಂತೆ ಮಾಡಿದೆ ಅಂತಾರೆ ಇಲ್ಲಿನ ವೈದ್ಯಾಧಿಕಾರಿ ಡಾ. ಮಮತಾ ಸಿಂಧೆ.
ಕೊವಿಡ್-19 ಆರಂಭವಾದಾಗಿನಿಂದ ಆಸ್ಪತ್ರೆಯಲ್ಲಿ ಹೊರ ರೋಗಿಗಳು ಬರ್ತಿಲ್ಲ, ದಿನಕ್ಕೆ 400 ರಿಂದ 500 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಕೊರೊನಾದಿಂದ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ಗಳನ್ನು ಮೀಸಲಿಟ್ಟಿದ್ದಕ್ಕೆ ಹೊರ ರೋಗಿಗಳ ಸಂಖ್ಯೆ ಇಳಿದಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಯ ಮುಖ್ಯ ದ್ವಾರದಲ್ಲೇ ಓರ್ವ ವೈದ್ಯರನ್ನು ನೇಮಕ ಮಾಡಲಾಗಿದ್ದು ಒಟ್ಟು ನಾಲ್ಕು ಜನ ವೈದ್ಯರು ಸರತಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರ ನೀಡಿರುವ ಅಗತ್ಯ ಸೌಲಭ್ಯಗಳಿಂದ ಈ ಮಟ್ಟಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ವೈದ್ಯೆ ಡಾ.ವಿಜಯಲಕ್ಷ್ಮಿ.
ಇನ್ನು ಕಮಲನಗರ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಯರಿಗೆ ನೀಡುತ್ತಿರುವ ಸೌಲಭ್ಯ ನೆರೆಯ ಮಹಾರಾಷ್ಟ್ರದಲ್ಲಿ ನೀಡುತ್ತಿಲ್ಲ. ಅಲ್ಲಿನ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಮೇಲ್ದರ್ಜೆಗೆ ಏರಿಸಿಲ್ಲ. ಪರಿಣಾಮ ಸೋಂಕಿತರು ಲಕ್ಷಾಂತರ ರೂ. ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಥದ್ರಲ್ಲಿ ಅದೆಷ್ಟೋ ಜನರು ನಮ್ಮ ರಾಜ್ಯದ ಆಸ್ಪತ್ರೆಯಲ್ಲಿ ನೀಡುತ್ತಿರುವ ಉಚಿತ ಚಿಕಿತ್ಸೆ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದು ನಮ್ಮ ರಾಜ್ಯದ ಹೆಮ್ಮೆಯ ವಿಷಯ ಅಂತಾರೆ ಸ್ಥಳೀಯ ಬಾಲಾಜಿ ತೆಲಂಗೆ.
ಒಟ್ಟಿನಲ್ಲಿ ಕೊರೊನಾ ಸಂಕಷ್ಟದಲ್ಲಿ ಕೆಲವೊಂದು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯ ಹೆಸರಿನಲ್ಲಿ ಲೂಟಿ ಮಾಡಲು ನಿಂತಿರುವಾಗ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ 100% ಸಾಧನೆ ಮಾಡಿದ ಆಸ್ಪತ್ರೆಯ ಯಶೋಗಾಥೆ ಮಹಾರಾಷ್ಟ್ರದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಸಂತಸವೇ ಸರಿ.