ಬಸವಕಲ್ಯಾಣ/ಬೀದರ್: ಕೃಷ್ಣಾನದಿ ತೀರದಲ್ಲಿ ಶಿವಲಿಂಗ, ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಪ್ರತಿಮೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಜೈ ಭಾರತಮಾತಾ ಸೇವಾ ಸಮಿತಿ ಹಾಗೂ ಬೆಂಗಳೂರಿನ ಹೇಮ ವೇಮರೆಡ್ಡಿ ಜನಸಂಘದ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಲಾಗಿದ್ದ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನ ಅವರ ರಾಜ್ಯ ಮಟ್ಟದ 608ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಜನಾರ್ಧನ ರೆಡ್ಡಿ ಮಾತನಾಡಿದರು.
ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಅವರ ಜನ್ಮಸ್ಥಳವಾಗಿರುವ ಕೃಷ್ಣಾ ತೀರದ 300 ಎಕರೆ ಜಮೀನಿನಲ್ಲಿ 111 ಅಡಿ ಎತ್ತರದ ಶಿವಲಿಂಗ, 50 ಅಡಿ ಎತ್ತರದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ 50 ಅಡಿ ಎತ್ತರದ ಮಹಾಯೋಗಿ ವೇಮನ ಅವರ ಪ್ರತಿಮೆ ಸ್ಥಾಪನೆ ಜತೆಗೆ ಇಲ್ಲಿ ಸಂಸ್ಥೆಯ ಮೂಲಕ ಸಮಾಜದ ಸೇರಿದಂತೆ ಇತರ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿ ಅವರ ಭವಿಷ್ಯ ರೂಪಿಸುವ ಯೋಜನೆ ರೂಪಿಸಲಾಗಿದೆ ಎಂದು ರೆಡ್ಡಿ ತಿಳಿಸಿದರು.
ರೆಡ್ಡಿ ಸಮಾಜದ ಪ್ರಗತಿಗಾಗಿ ಮಹತ್ವದ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದ್ರು. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸುವಲ್ಲಿ ನನ್ನ ಮತ್ತು ಸಮಾಜದ ಕೊಡುಗೆ ಮಹತ್ವದ್ದಾಗಿದೆ. ಇದನ್ನು ಯಾರೂ ಕೂಡ ಮರೆಯುವಂತಿಲ್ಲ. ಈಗ ಅವರೇ ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ಸಮಾಜದ ಪ್ರಗತಿ ದೃಷ್ಟಿಯಿಂದ ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.