ಬಸವಕಲ್ಯಾಣ (ಬೀದರ್): ಅನಾರೋಗ್ಯ ಹಿನ್ನೆಲೆಯಲ್ಲಿ ಬೀದರ್ನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ವರ ಗ್ರಾಮದ 48 ವರ್ಷದ ವ್ಯಕ್ತಿ ಸೋಮವಾರ ತಡ ರಾತ್ರಿ ಕೊನೆಯುಸಿರೆಳೆದಿದ್ದ. ಮಂಗಳವಾರ ಬೆಳಗ್ಗೆ ತಹಶೀಲ್ದಾರ್ ಸಾವಿತ್ರಿ ಸಲಗರ್ ನೇತೃತ್ವದಲ್ಲಿ ರಾಜೇಶ್ವರ ಗ್ರಾಮದ ಚಿತಾಗಾರದಲ್ಲಿ ಕೋವಿಡ್-19 ವಿಧಾನದಂತೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಲಾರಿ ಚಾಲಕನಾಗಿದ್ದ ಈತ ಕಳೆದ ಮೇ 7ರಂದು ಅನಾರೋಗ್ಯದಿಂದ ಬಳಲಿ ರಾಜೇಶ್ವರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ. ಈತನ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಕೊರೊನಾ ಶಂಕೆ ವ್ಯಕ್ತಪಡಿಸಿ ತಕ್ಷಣ ಬೀದರ್ನ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು. ಜ್ವರ, ಬಿಪಿ, ಶುಗರ್ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳಿಂದಾಗಿ ಈತ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯಕೀಯ ಮೂಲಗಳು ಖಚಿತ ಪಡಿಸಿವೆ.
ಮೊದಲ ವರದಿ ನೆಗೆಟಿವ್ : ಮೇ 7ರಂದು ಈತ ಬೀದರ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಈತನ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ, ಮೊದಲ ಬಾರಿ ಕಳಿಸಿದ ವರದಿ ನಗೆಟಿವ್ ಬಂದಿತ್ತು. ಮರು ಪರೀಕ್ಷೆಗಾಗಿ ಮತ್ತೊಮ್ಮೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್ ಆರ್ ಮಹಾದೇವ ಸ್ಪಷ್ಟಪಡಿಸಿದ್ದಾರೆ.
ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಆತನಿಗೆ ಕೊರೊನಾ ಸೋಂಕು ತಗುಲಿದೆ ಎಂದು ರಾಜೇಶ್ವರ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಗಾಳಿ ಸುದ್ದಿ ಹಬ್ಬಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಈತನ ಮೊದಲ ವರದಿ ನೆಗೆಟಿವ್ ಬಂದಿರುವ ಕಾರಣ ಜನರಲ್ಲಿ ಮನೆ ಮಾಡಿದ್ದ ಆತಂಕ ದೂರವಾದಂತಾಗಿದೆ.
28 ಜನರಿಗೆ ಕ್ವಾರಂಟೈನ್ : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆತನ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಜೊತೆಗಿದ್ದ ಲಾರಿ ಕ್ಲೀನರ್ ಸೇರಿ ಸುಮಾರು 16 ಜನರನ್ನು ರಾಜೇಶ್ವರದ ವಸತಿ ನಿಲಯ ಹಾಗೂ ಬಸವಕಲ್ಯಾಣದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಹೈದರಾಬಾದ್‌ನಿಂದ ಈತನ ಜೊತೆಗೆ ಆಗಮಿಸಿದ ಪುತ್ರಿ, ಅಳಿಯ ಸೇರಿ ಅವರ ಕುಟುಂಬದ 12 ಜನರನ್ನು ಭಾಲ್ಕಿಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.