ಬಸವಕಲ್ಯಾಣ (ಬೀದರ್): ಬಿಜೆಪಿ ನಾಯಕರು ಉಳಿದುಕೊಂಡಿರುವ ನಿವಾಸದಲ್ಲಿ ಮತದಾರರಿಗೆ ಹಂಚಲು ಹಣ ತಂದಿಡಲಾಗಿದೆ. ಹೀಗಾಗಿ, ಆ ನಿವಾಸದ ತಪಾಪಣೆ ನಡೆಸಬೇಕೆಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿದ ಪ್ರಸಂಗ ಬುಧವಾರ ರಾತ್ರಿ ಜರುಗಿತು.
ಈ ವೇಳೆ ಸ್ಥಳಕ್ಕಾಗಮಿಸಿದ ವಸತಿ ಸಚಿವ ವಿ.ಸೋಮಣ್ಣ, ಇಲ್ಲಿ ಅಂತಹದ್ದು ಏನೂ ಇಲ್ಲ. ನೀನು ಕೂಡ ನಮ್ಮ ಹುಡುಗನೇ ಆಗಿದ್ದಿಯಾ, ಅನವಶ್ಯಕವಾಗಿ ಕಿರಿಕಿರಿ ಮಾಡಬೇಡ ಎಂದು ಖೂಬಾಗೆ ಸೂಚಿಸಿದರು. ಆದರೆ, ಪಟ್ಟು ಹಿಡಿದು ಖೂಬಾ ಸ್ಥಳದಲ್ಲಿಯೇ ನಿಂತರು. ಬಳಿಕ ಅಲ್ಲಿದ್ದ ಸಿಪಿಐ ವೀರಾರೆಡ್ಡಿ ಹಾಗೂ ಪೊಲೀಸ್ ಅಧಿಕಾರಿಗಳು ನಿಮಗೆ ಸಂಶಯವಿದ್ದರೆ ಸಂಬಂಧಪಟ್ಟ ಚುನಾವಣಾ ಆಯೋಗಕ್ಕೆ ದೂರು ನೀಡಿ. ಆದರೆ, ಈ ರೀತಿಯಲ್ಲಿ ಬಂದು ಕಿರಿಕಿರಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿ ಖೂಬಾ ಹಾಗೂ ಅವರ ಬೆಂಬಲಿಗರನ್ನು ಸ್ಥಳದಿಂದ ಕಳಿಸಿದರು.
ಸ್ಥಳದಿಂದ ಖೂಬಾ ಅವರು ನಿರ್ಗಮಿಸಿದ ನಂತರ ಮನೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಖೂಬಾ ಅವರಿಗೆ ಸೋಲಿನ ಭೀತಿ ಎದುರಾಗಿ ಹತಾಶೆಗೊಂಡಿದ್ದಾರೆ. ಹೀಗಾಗಿ, ಈ ರೀತಿ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕದ ವಿಚಾರದಲ್ಲಿ ಮೋದಿಯವರೇ ಮೌನ ವಹಿಸಿರುವುದೇಕೆ: ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಪ್ರಶ್ನೆ