ಬಸವಕಲ್ಯಾಣ : ಶಾಂತಿಗೆ ಹೆಸರಾದ ಶರಣರ ನಾಡಿನಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರದಲ್ಲಿ ಮತದಾರಿಗೆ ಹಣ ಹಂಚಲಾಗುತ್ತಿದೆ. ಬಿಜೆಪಿಯಿಂದ ಹಣ ಬಲ ಮತ್ತು ಅಧಿಕಾರ ಬಲದ ಮೇಲೆ ಚುನಾವಣೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆರೋಪಿಸಿದರು.
ಬಿಜೆಪಿಯಿಂದ ಹಣ ಹಂಚಲಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಪೊಲೀಸ್ ಠಾಣೆಗೆ ಬಂದ ಮಾಜಿ ಶಾಸಕ ಖೂಬಾ, ಗಾಂಧಿವೃತ್ತದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಿ ಈಗ ಸೋಲು ಖಚಿತವಾಗುತ್ತಿದ್ದಂತೆ ವಿಚಲಿತರಾದ ಬಿಜೆಪಿಯವರು ಹೇಗಾದರೂ ಮಾಡಿ ಹಣ ನೀಡಿಯಾದರೂ ಮತ ಪಡೆಯಬೇಕು ಅನ್ನೋ ಉದ್ದೇಶದಿಂದ ಈ ರೀತಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದಿನ ಯಾವ ಚುನಾವಣೆಗಳಲ್ಲಿ ಈ ರೀತಿ ನಡೆದಿಲ್ಲ. ಆದರೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ, ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದಾರೆ. ಯಾರೂ ಕೂಡ ಹಣ ಪಡೆದು ಮತ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಚುನಾವಣೆ ಪ್ರಚಾರ ಅಂತ್ಯವಾದರೂ ಕೆಲ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿದುಕೊಂಡು ತಿರುಗಾಡುತಿದ್ದಾರೆ. ಇವೆಲ್ಲದರ ಕುರಿತು ತನಿಖೆ ನಡೆಸಿ ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವೋಟಿಗಾಗಿ ನೋಟು!: ಬಸವ ಕಲ್ಯಾಣದಲ್ಲಿ ಹಣ ಹಂಚಲು ಬಂದವನಿಗೆ ಬಿತ್ತು ಸಖತ್ ಧರ್ಮದೇಟು...!
ಕ್ರಮಕ್ಕೆ ಗೌತಮ್ ಒತ್ತಾಯ : ಮತದಾರರನ್ನು ಸೆಳೆಯಲು ಬಿಜೆಪಿ ಪಕ್ಷದವರು ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆ. ಕೂಡಲೇ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಬಿಜೆಪಿಯವರು ಸೋಲಿನ ಭೀತಿಯಿಂದಾಗಿ ಜನರಿಗೆ ಹಣ ಹಂಚುತ್ತಿದ್ದಾರೆ.
ಈ ರೀತಿ ಹಣ ಹಂಚುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಅವರ ಪುತ್ರ ಗೌತಮ್ ಬಿ.ನಾರಾಯಣರಾವ್ ಒತ್ತಾಯಿಸಿದರು. ಇದೇ ವೇಳೆ ಕ್ಷೇತ್ರದಲ್ಲಿ ನಮ್ಮ ತಂದೆಯವರಾದ ದಿ. ಶಾಸಕ ಬಿ.ನಾರಾಯಣರಾವ್ ಅವರು ಕೈಗೊಂಡ ಅಭಿವೃದ್ಧಿ ಕೆಲಸ ನೋಡಿ ಜನರು ಈ ಬಾರಿ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.