ಬಸವಕಲ್ಯಾಣ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಿಎಂ ಖುರ್ಚಿಗಾಗಿ ಪ್ರತಿನಿತ್ಯ ತೆರೆಮೆರೆಯಲ್ಲಿ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಆಡಳಿತ ನೀಡುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರ ವಿಸರ್ಜನೆ ಮಾಡಿ, ಚುನಾವಣೆ ಎದುರಿಸಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದರು.
ನಗರದ ಶಾಹಿಲ್ ಕಲ್ಯಾಣ ಪಂಟಪದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡಾ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿವೆ. ಜನಪರ ಆಡಳಿತ ನಡೆಸುವಲ್ಲಿ ವಿಫಲಗೊಂಡಿದೆ. ಹೀಗಾಗಿ ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ನಡೆಸಿ ಸ್ಥಿರ ಸರ್ಕಾರ ನಿರ್ಮಾಣ ಮಾಡಲು ಅವಕಾಶ ನೀಡಬೇಕು ಎಂದರು.
ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಅವರನ್ನು ಇಳಿಸಲಾಗುತ್ತಿದೆ ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಸರಕಾರದಲ್ಲಿ ಇದ್ದವರಿಗೆ ಚರ್ಮ ದಪ್ಪವಾಗಿದೆ. ಅಭಿವೃದ್ದಿ ವಿಷಯ ಸೇರಿದಂತೆ ರಾಜ್ಯದ ಜನರ ಜ್ವಲಂತ ಸಮಸ್ಯೆ ಆಲಿಸಲು ಕೂಡಲೇ ವಿಧಾನ ಮಂಡಲದ ಅಧಿವೇಶನ ಕರೆದು ಚರ್ಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದರೂ ಕೂಡಾ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.