ಬೀದರ್: ಜ್ಯಾತ್ಯಾತೀತ ನಿಲುವುಗಳು ಒಗ್ಗೂಡಬೇಕು ಎಂದು ಹೇಳುವವರು ಜೆಡಿಎಸ್ ಪಕ್ಷದಲ್ಲೂ ಸಾಕಷ್ಟು ಜನ ಇದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಜೆಡಿಎಸ್ ಕಾರ್ಯಕರ್ತರು ಆ ಪಕ್ಷದ ಧ್ವಜ ಹಿಡಿದು ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾತನಾಡಿದ ಅವರು, ಜೆಡಿಎಸ್ನಲ್ಲೂ ಕಾಂಗ್ರೆಸ್ ಬೆಂಬಲಿಗರಿದ್ದಾರೆ. ಡಿಕೆಶಿ ಮೇಲಿನ ಅಭಿಮಾನಕ್ಕೆ ಜಾತ್ಯಾತೀತ ನಿಲುವು ಹೊಂದಿದ್ದವರು ಬಂದಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ಬಾರಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದರು. ಸರ್ಕಾರ ಒಂದು ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಒಂದು ರೂಪಾಯಿ ಪರಿಹಾರ ಎಲ್ಲಾದ್ರು ಬಂದಿರುವುದು ಇದ್ದರೆ ದಾಖಲೆ ಸಮೇತ ತೋರಿಸಲಿ. 25 ಲಕ್ಷ ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ರೈತರು ಕಳೆದುಕೊಂಡಿದ್ದಾರೆ ಎಂದು ಸರ್ಕಾರವೇ ಹೇಳಿದೆ. ಪರಿಹಾರ ಹಣ ಎಲ್ಲಿಗೆ ಹೊಯ್ತು? ಬರೀ ಹೇಳಿಕೆ ಕೊಟ್ಟರೆ ಸಾಕಾ? ಒಂದು ಲಕ್ಷ ಕೋಟಿ ರೂಪಾಯಿ ಹಾನಿಯಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ನಾಯಕರಿಗೆ ನೆರೆ ಪರಿಹಾರಕ್ಕಿಂತಲೂ ಅಧಿಕಾರ ದಾಹ ಹೆಚ್ಚಾಗಿದೆ ಎಂದು ಕಟುವಾಗಿ ಟೀಕಿಸಿದರು.