ಬೀದರ್: ಲಾಕ್ ಡೌನ್ ಕರ್ತವ್ಯ ನಿರತ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದವರಿಗೆ ಪೊಲೀಸ್ ಅಧಿಕಾರಿಗಳು ಸರಿಯಾದ ಪಾಠ ಕಲಿಸಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಗಸ್ತಿನಲ್ಲಿದ್ದ ಚಿಂತಾಕಿ ಠಾಣೆ ಪೇದೆ ಗುರಲಿಂಗ್, ಗ್ರಾಮದ ದೇವಸ್ಥಾನದ ಕಟ್ಟೆ ಮೇಲೆ ಗುಂಪು ಕಟ್ಟಿಕೊಂಡು ಕುಳಿತಿದ್ದ ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ. ಈ ವೇಳೆಯಲ್ಲಿ ಗದ್ದಲ ನಿರ್ಮಾಣವಾಗಿ ವ್ಯಕ್ತಿಯೊಬ್ಬನ ತಲೆಗೆ ಗಾಯವಾಗಿದೆ.
ಕೆಲವರು ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಸಿ, ಆವಾಜ್ ಹಾಕಿ ದರ್ಪ ತೋರಿ ದಿಗ್ಬಂಧನಗೊಳಿಸಿದ್ದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ ಪಿ ಡಾ.ದೇವರಾಜ್. ಬಿ, ಸಿಪಿಐ ರಾಘವೇಂದ್ರ ಹಾಗೂ ಪಿಎಸ್ ಐ ಗಳಾದ ಜಗದೀಶ ನಾಯಕ, ಮಂಜುನಾಥ ಗೌಡ ಅವರ ತಂಡ ಪೊಲೀಸ್ ಪೇದೆಯನ್ನು ರಕ್ಷಿಸಿದ್ದಾರೆ.
ಪೇದೆ ಮತ್ತು ಅಧಿಕಾರಿಗಳಿಗೆ ಆವಾಜ್ ಹಾಕಿದ ನಂದಕುಮಾರ್, ಸಿದ್ರಾಮ್ ಹಾಗೂ ಶಿವರಾಜ್ ಎಂಬುವವರಿಂದ ನಡು ಬೀದಿಯಲ್ಲಿ ಪೇದೆಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದಾರೆ.