ಬೀದರ್: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಪ್ತಿ ಮಾಡಿದ್ದ ಭೂಮಿಯಲ್ಲೇ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದನ್ನು ಕನ್ನಡ ಸಮರ ಸೇನೆ ಕಾರ್ಯಕರ್ತರು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ದಾಳಿ ನಡೆಸಿ ವಾಹನಗಳನ್ನು ಜಪ್ತಿ ಮಾಡಿ, ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ತಾಲೂಕಿನ ಅಲಿಯಾಬಾದ್ ಗ್ರಾಮದ ಸರ್ವೇ ನಂಬರ್ 33ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುವಾಗ ದಾಳಿ ನಡೆಸಿದ ಅಧಿಕಾರಿಗಳ ಟೀಂ, ಜೆಸಿಬಿ ಯಂತ್ರ, ಒಂದು ಲಾರಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ. ದಾಳಿ ವೇಳೆ ಅಕ್ರಮದಲ್ಲಿ ತೊಡಗಿದ್ದ ಚಾಲಕರು ಪರಾರಿಯಾಗಿದ್ದು, ವಾಹನಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಲಿಂಗರಾಜು ತಿಳಿಸಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯಷ್ಟೆ ಈ ಭಾಗದಲ್ಲಿ ಅಕ್ರಮ ಜಲ್ಲಿ ಕ್ರಷರ್ ನಡೆಸಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಹಿನ್ನೆಲೆ, ಅಧಿಕಾರಿಗಳು ದಾಳಿ ನಡೆಸಿ ಈ ಭಾಗವನ್ನು ಜಪ್ತಿ ಮಾಡಿದ್ದರು. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗಲೇ, ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಆರೋಪಿಗಳ ಮೇಲೆ ಕ್ರಿಮಿನಲ್ ಕೆಸ್ ದಾಖಲಿಸಲು ಅವಕಾಶವಿದೆ ಎಂದು ಲಿಂಗರಾಜು ಹೇಳಿದ್ದಾರೆ. ಇನ್ನು ಈ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.