ಬಸವಕಲ್ಯಾಣ(ಬೀದರ್): ಬಸವಕಲ್ಯಾಣ ತಾಲೂಕಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಶನಿವಾರ ಮತ್ತೆ 3 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ತಾಲೂಕಿನ ಜನರ ನಿದ್ದೆಗೆಡಿಸಿದೆ.
ಕೇವಲ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ತಲುಪಿದರೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. ಮಂಗಳವಾರ ಒಂದೇ ದಿನ ಕೋಹಿನೂರನಲ್ಲಿ 10 ಜನಲ್ಲಿ ಸೋಂಕು ಪತ್ತೆಯಾಗಿತ್ತು. ಬುಧವಾರವೂ ಕೋಹಿನೂರನಲ್ಲಿ 4 ಜನ ಸೇರಿ ತಾಲೂಕಿನಲ್ಲಿ 12 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಶನಿವಾರ ಕೂಡ ಕೊರೊನಾ ಅರ್ಭಟ ಮುಂದುವರೆದಿದ್ದು, ಜನರ ನಿದ್ದೆಗೆಡಿಸಿದೆ.
ತಾಲೂಕಿನ ಕೋಹಿನೂರನಲ್ಲಿ 2, ಮಿರ್ಖಲನಲ್ಲಿ 1 ಪ್ರಕರಣ ಪತ್ತೆಯಾಗಿದ್ದು, ಹೊಸದಾಗಿ ಪತ್ತೆಯಾದ ಮೂವರು ಸೋಂಕಿತರು ಮಹಿಳೆಯರೇ ಆಗಿದ್ದಾರೆ. ಇವರನ್ನು ಬೀದರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೋಂಕು ದೃಢಪಟ್ಟವರೆಲ್ಲರೂ ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದು, ಕೋಹಿನೂರ ಗ್ರಾಮದ ಇಬ್ಬರು ಮಹಿಳೆಯರು ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು. ಮಿರ್ಖಲ್ ಮಹಿಳೆ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಮನೆಗೆ ಕಳಿಸಲಾಗಿತ್ತು. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಯಾ ಗ್ರಾಮಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯವಿರುವ ಮುಂಜಾಗೃತಾ ಕ್ರಮಗಳನ್ನು ಕ್ರಮಕೈಗೊಳ್ಳಲಾಗುತ್ತಿದೆ.