ಬಸವಕಲ್ಯಾಣ(ಬೀದರ್): ತೀವ್ರ ಜಿದ್ದಾ ಜಿದ್ದಿನ ಕಣವೆಂದೇ ಹೇಳಲಾಗುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಪತಿ, ಪತ್ನಿಯರಿಬ್ಬರು ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಒಂದೇ ಬಾರಿಗೆ ಗ್ರಾಮ ಪಂಚಾಯತ್‌ಗೆ ಪ್ರವೇಶ ಮಾಡಿದ ಪ್ರಸಂಗ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಲಿತ ಮುಖಂಡ ಸಂಜೀವ ಗಾಯಕವಾಡ್ ಹಾಗೂ ಅವರ ಧರ್ಮ ಪತ್ನಿ ಪೂರ್ಣಿಮಾ ಗಾಯಕವಾಡ್ ಏಕಕಾಲದಲ್ಲಿಯೇ ಗ್ರಾ.ಪಂ ಪ್ರವೇಶಿಸಿದ ದಂಪತಿಗಳಾಗಿದ್ದಾರೆ. ತಾಲೂಕಿನ ಮೋರಖಂಡ ಗ್ರಾಮದ ವಾರ್ಡ್ ಸಂಖ್ಯೆ-2ರ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಸಂಜೀವ ಗಾಯಕವಾಡ್ ತಮ್ಮ ಪ್ರತಿ ಸ್ಪರ್ಧಿ ಸುಭಾಷ ಸೋನಕಾಂಬಳೆ ಅವರ ವಿರುದ್ಧ 208 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಇದೇ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ತಳಬೋಗ್ ಗ್ರಾಮದ ವಾಡ್ ಸಂಖ್ಯೆ-1ರಿಂದ ಪರಿಶಿಷ್ಟ ಜಾತಿಗೆ ಮೀಸಲಿದ್ದ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿದ ಪೂರ್ಣಿಮಾ ಗಾಯಕವಾಡ್ ತಮ್ಮ ಪ್ರತಿ ಸ್ಪರ್ಧಿ ರಮಾ ಸಂಜಿತ್ ಅವರ ವಿರುದ್ಧ 49 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಚಿಂತಾಮಣಿ: 9 ಬಾರಿ ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದ ಸುಲ್ತಾನ್ ಷರೀಫ್ ಕುಟುಂಬ
ಹಿಂದೆ ಮೂರು ಬಾರಿ ಗ್ರಾ.ಪಂ ಸದಸ್ಯರಾಗಿದ್ದ ಸಂಜೀವ ಗಾಯಕವಾಡ್ ಈಗ ಮತ್ತೆ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಗ್ರಾ.ಪಂಗೆ ಪ್ರವೇಶಿಸಿದರೆ, ಇವರ ಪತ್ನಿ ಪೂರ್ಣಿಮಾ ಇದೇ ಮೊದಲ ಬಾರಿಗೆ ಜಯಗಳಿಸಿದ್ದಾರೆ. ಪತಿ, ಪತ್ನಿ ಇಬ್ಬರು ಒಂದೇ ಅವಧಿಯಲ್ಲಿ ಆಯ್ಕೆಯಾಗಿದ್ದು, ತಾಲೂಕಿನಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ.