ಬಸವಕಲ್ಯಾಣ: ಹೈ-ಕ ಚಳುವಳಿಯಲ್ಲಿ ನೂರಾರು ಜನ ಹುತಾತ್ಮರಾದ ಐತಿಹಾಸಿಕ ಗೋರ್ಟಾ(ಬಿ) ಗ್ರಾಮದಲ್ಲಿ ಬಿಜೆಪಿಯಿಂದ ನಿರ್ಮಿಸಲು ಯೋಜಿಸಿದ್ದ ಹುತಾತ್ಮ ಸ್ಮಾರಕ ಕಾಮಗಾರಿ ಪೂರ್ಣಗೊಳಿಸಬೇಕೆಂದು ವಿಶ್ವಕ್ರಾಂತಿ ದಿವ್ಯ ಪೀಠ ಒತ್ತಾಯಿಸಿದೆ.
ಸ್ಮಾರಕ ಕಾಮಗಾರಿ ನೆನೆಗುದ್ದಿಗೆ ಬಿದ್ದಿರುವುದನ್ನು ಖಂಡಿಸಿ, ಪೀಠದ ಅಧ್ಯಕ್ಷ, ಹೊರಾಟಗಾರ ಓಂಪ್ರಕಾಶ ರೊಟ್ಟೆ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಮಳೆಯ ಮಧ್ಯೆಯೂ ಪಾದಯಾತ್ರೆ ಮೂಲಕ ಸರದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕ ಸ್ಥಳದವರೆಗೆ ಆಗಮಿಸಿದ ಪ್ರಮುಖರು, ಕೈಯಲ್ಲಿ ರಾಷ್ಟ್ರ ಧ್ವಜಗಳನ್ನು ಹಿಡಿದು ಹುತಾತ್ಮ ಯೋಧರ ಹೆಸರಲ್ಲಿ ಜಯಘೋಷ ಕೂಗುತ್ತ ಹೆಜ್ಜೆ ಹಾಕಿದರು.
ಗೋರ್ಟಾ(ಬಿ) ಗ್ರಾಮದಲ್ಲಿ ಹುತಾತ್ಮ ಸ್ಮಾರಕ ನಿರ್ಮಾಣ ಹಾಗೂ ಸರ್ದಾರ್ ಪಟೇಲ್ ಮೂರ್ತಿ ಪ್ರತಿಷ್ಠಾಪನೆಗೆ ಕಳೆದ 2014ರಲ್ಲಿ ಅಂದಿನ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಚಾಲನೆ ನೀಡಲಾಗಿತ್ತು. ಆದರೆ ಕಾಮಗಾರಿಗೆ ಚಾಲನೆ ನೀಡಿ ಆರು ವರ್ಷಗಳು ಕಳೆದ್ರೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂ ಪ್ರಕಾಶ್ ರೊಟ್ಟೆ ಮಾತನಾಡಿ, ಹೈದ್ರಾಬಾದ್ ನಿಜಾಮರ ಆಳ್ವಿಕೆಯಲಿದ್ದ ಅಂದಿನ ಹೈ-ಕ ಪ್ರದೇಶ ಮುಕ್ತಿಗಾಗಿ ನಡೆದ ಚಳುವಲಿಯಲ್ಲಿ ಗೋರ್ಟಾ ಗ್ರಾಮದ ನೂರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಹುತಾತ್ಮ ಯೋಧರ ಸ್ಮರಣಾರ್ಥ ಸ್ಮಾರಕ ನಿರ್ಮಿಸಿ, ಒಂದು ವರ್ಷದೊಳಗಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಉದ್ಘಾಟಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ್ದರು. ಆದರೆ ಅವರ ಹೇಳಿಕೆ ಕೇವಲ ಘೋಷಣೆಗೆ ಸೀಮಿತವಾಗಿದೆ ಎಂದು ಆರೋಪಿಸಿದರು. ಪಕ್ಷದಲ್ಲಿನ ಆಂತರಿಕ ಕಲಹದಿಂದ ಇಲ್ಲಿಯ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ. ಪಕ್ಷದಲ್ಲಿ ನಿಮ್ಮ ಆಂತರಿಕ ಕಲಹ ಏನೇ ಇದ್ದರೂ ಎಲ್ಲವನ್ನು ಬದಿಗೊತ್ತಿ ತಕ್ಷಣ ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸತ್ಯಾಗ್ರಹದಲ್ಲಿ ಪ್ರಮುಖರಾದ ದೀಪಕ ಚಲ್ವಾ, ಕುಶಾಲ, ಗ್ರಾಮದ ಪ್ರಮುಖರಾದ ಸುಭಾಷ ಪತಂಗೆ, ಬಸವರಾಜ ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ನಾಗನಾಥ ಪಾಟೀಲ, ಶಂಕರ ಪತಂಗೆ ಸೇರಿದಂತೆ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದಾರೆ.