ಬೀದರ್ : ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಶಕುಂತಲಾ ಪಾಟೀಲ್ ವಸತಿ ಶಾಲೆಯ ಅತಿಥಿ ಗೃಹದಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಬೀದರ್ ಬ್ರಿಮ್ಸ್ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಮೂಲಕ ವಸತಿ ಶಾಲೆಯ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಮನಾಬಾದ್ ತಾಲೂಕಿನಾದ್ಯಂತ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಬೆನ್ನಲ್ಲೇ ಶಾಸಕರ ಕುಟುಂಬಸ್ಥರು ಕೊರೊನಾ ಟೆಸ್ಟ್ಗೊಳಗಾಗಿದ್ದರು. ಈ ವೇಳೆ ಇಬ್ಬರು ಸಹೋದರರಲ್ಲೂ ಸೋಂಕು ಪತ್ತೆಯಾಗಿದೆ. ಶಾಸಕರಿಗೆ ಸೋಂಕು ಹರಡಿದ ಸುದ್ದಿ ತಿಳಿಯುತ್ತಿದ್ದಂತೆ ಕ್ಷೇತ್ರದ ಜನರು, ಕಾರ್ಯಕರ್ತರು ಬೇಗ ಗುಣಮುಖವಾಗಲಿ ಎಂದು ಶ್ರೀಕ್ಷೇತ್ರ ವೀರಭದ್ರೆಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಗನ್ಮ್ಯಾನ್, ಪಿಎಗೂ ಸೋಂಕು : ಶಾಸಕ ರಾಜಶೇಖರ್ ಪಾಟೀಲ್ ಹಾಗೂ ಡಾ. ಚಂದ್ರಶೇಖರ್ ಪಾಟೀಲ್ ಅವರಿಗೆ ಪಾಸಿಟಿವ್ ದೃಢವಾಗುತ್ತಿದಂತೆ ಪ್ರಾಥಮಿಕ ಸಂಪರ್ಕಕ್ಕೆ ಬರುವ ಗನ್ಮ್ಯಾನ್ ಹಾಗೂ ಆಪ್ತ ಸಹಾಯಕರ ಗಂಟಲು ದ್ರವದ ಮಾದರಿ ಪರೀಕ್ಷೆಗೊಳಪಡಿಸಿಲಾಗಿತ್ತು. ಇದರಲ್ಲಿ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಅವರ ಗನ್ಮ್ಯಾನ್ ಹಾಗೂ ಶಾಸಕ ರಾಜಶೇಖರ್ ಪಾಟೀಲ್ ಅವರ ಆಪ್ತ ಸಹಾಯಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಉಳಿದ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.