ಬಸವಕಲ್ಯಾಣ: ನೂತನ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಹುಲಸೂರ ತಾಲೂಕಿನಲ್ಲಿ ಸ್ಥಾಪಿಸಲಾದ ತಾಲೂಕು ಪಂಚಾಯತ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜುರುಗಿತು. ತಾಪಂಗೆ ಪ್ರಥಮ ಅಧ್ಯಕ್ಷರಾಗಿ ಬೇಲೂರ ಕ್ಷೇತ್ರದ ಸದಸ್ಯ ಸಿದ್ರಾಮಪ್ಪ ಕಾಮಣ್ಣ ಹಾಗೂ ಮುಚಳಂಬ ಕ್ಷೇತ್ರದ ಸದಸ್ಯೆ ಶಾಂತಮ್ಮ ಪಂಚಾಳ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂಬಂಧ ಮಧ್ಯಾಹ್ನ ತಾಪಂ ಕಾರ್ಯಾಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತ ಭಂವಸಿಂಗ್ ಮೀನಾ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಅವಿಭಜಿತ ಬಸವಕಲ್ಯಾಣ-ಹುಲಸೂರ ತಾಲೂಕಿನಲ್ಲಿ ಒಟ್ಟು 28 ಜನರು ತಾಲೂಕು ಪಂಚಾಯತ್ ಸದಸ್ಯರಿದ್ದು, ನೂತನ ತಾಲೂಕು ಕೇಂದ್ರವಾಗಿ ಅಸ್ಥಿತ್ವಕ್ಕೆ ಬಂದ ಹುಲಸೂರ ತಾಲೂಕಿನ ವ್ಯಾಪ್ತಿಗೆ 5 ತಾಪಂ ಕ್ಷೇತ್ರಗಳು ಸೇರಿವೆ. ಇದರಲ್ಲಿ 4 ಜನ ಸದಸ್ಯರು ಬಿಜೆಪಿಗೆ ಸೇರಿದರೆ ಓರ್ವ ಸದಸ್ಯರು ಸ್ವತಂತ್ರವಾಗಿ ಆಯ್ಕೆಯಾದವರಾಗಿದ್ದಾರೆ. ಒಟ್ಟು 5 ಜನ ಸದಸ್ಯರಲ್ಲಿ ಬಿಜೆಪಿಯ 4 ಜನ ಸದಸ್ಯರಿದ್ದ ಕಾರಣ ನೂತನ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದೆ.
ವಿಜಯೋತ್ಸವ:
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕಾರ್ಯಾಲಯದ ಹೊರಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸಂಸದ ಭಗವಂತ ಖೂಬಾ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಪಂ ಪ್ರತಿಪಕ್ಷದ ನಾಯಕ ಸುಧೀರ ಕಾಡಾದಿ, ಸದಸ್ಯ ಗುಂಡುರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ, ಪ್ರಮುಖರಾದ ಸಂಜಯ ಪಟವಾರಿ, ಈಶ್ವರಸಿಂಗ್ ಠಾಕೂರ, ದೀಪಕ್ ಗುಡ್ಡಾ, ಶರಣು ಸಲಗರ ಸೇರಿದಂತೆ ಪ್ರಮುಖರು ವಿಜಯೋತ್ಸವದಲ್ಲಿ ಪಾಲ್ಗೊಂಡು, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಮಾಜಿ ಅಧ್ಯಕ್ಷ ಪುತ್ರನಿಗೆ ಒಲಿದ ಅಧ್ಯಕ್ಷ ಸ್ಥಾನ:
ಹುಲಸೂರ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೇಲೂರ ಕ್ಷೇತ್ರದ ಬಿಜೆಪಿ ಸದಸ್ಯ ಸಿದ್ರಾಮಪ್ಪ ಕಾಮಣ್ಣ ತಾಪಂ ಮಾಜಿ ಅಧ್ಯಕ್ಷರ ಪುತ್ರರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಬಸವಕಲ್ಯಾಣ ತಾಪಂ ಅಧ್ಯಕ್ಷರಾಗಿದ್ದ ವೀರಶಟ್ಟಿ ಕಾಮಣ್ಣ ಅವರ ಹಿರಿಯ ಪುತ್ರ. ತಂದೆ ನಂತರ ಮತ್ತೆ ಮಗನಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಗ್ರಾಮಸ್ಥರಲ್ಲಿ ಹರ್ಷ ತಂದಿದೆ.