ಬೀದರ್: ಭಯಂಕರ ಬರಗಾಲದ ನಡುವೆ ಅನ್ನದಾತರ ಜೀವನಾಡಿಯಾದ ಜೋಡೆತ್ತುಗಳ ಸಾಂಪ್ರದಾಯಿಕ ಹೋಳ ಹಬ್ಬ, ಜಿಲ್ಲೆಯ ಬಹುತೇಕ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶ್ರಾವಣ ಮಾಸದ ಕೊನೆ ದಿನವಾದ ನಿನ್ನೆ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಇನಗ, ಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದ ಹೋಳ ಹಬ್ಬವನ್ನು ಆಚರಿಸಿದರು. ರೈತರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು.
ವರ್ಷ ಪೂರ್ತಿ ನೇಗಿಲಿಗೆ ಹೆಗಲು ಕೊಡುವ ಎತ್ತುಗಳಿಗೆ ಇಂದು ಅರಿಶಿನ ಮತ್ತು ಎಣ್ಣೆಯಿಂದ ಮಾಲಿಶ್ ಮಾಡಿ, ಕೊರಳಲ್ಲಿ ಕವಡೆ ಮಾಲೆ, ಕಾಲಿಗೆ ಗೆಜ್ಜೆಗಂಟೆ, ಹಣೆಗೆ ರಂಗು ರಂಗಿನ ಭಾಸಿಂಗ ಕಟ್ಟಿ ಶೃಂಗರಿಸಲಾಗಿತ್ತು. ಮೆರವಣಿಗೆ ಮೂಲಕ ಊರಿನ ದೇವರ ದರ್ಶನ ಮಾಡಿಸಿ ವಿಶಿಷ್ಟವಾಗಿ ಹಬ್ಬ ಆಚರಿಸಲಾಯಿತು.