ಬೀದರ್: ಲಾಕ್ಡೌನ್ ನಡುವೆ ಭಯಂಕರ ಬೇಸಿಗೆಯಿಂದ ಬತ್ತಿ ಹೋದ ಜಿಲ್ಲೆಯ ಜೀವ ನದಿ ಮಾಂಜ್ರಾದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ದಿನಕ್ಕೆ ನೂರಾರು ಟ್ರ್ಯಾಕ್ಟರ್ಗಳು ನದಿ ಒಡಲನ್ನು ಬರಿದಾಗಿಸ್ತಿದ್ದು ಕಂಡೂ ಕಾಣದಂತೆ ಅಧಿಕಾರಿಗಳು ಜಾಣ ಮೌನರಾಗಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಮಖಂಡಿ, ಸಾಯಗಾಂವ್, ಮೇಹಕರ ಭಾಗದಲ್ಲಿ ಹಗಲು ರಾತ್ರಿ ಎನ್ನದೇ ನೂರಾರು ಜನರು ನದಿಯಲ್ಲಿನ ಮರಳನ್ನು ಅಕ್ರಮವಾಗಿ ಸಾಗಣೆ ಮಾಡ್ತಿದ್ದಾರೆ. ಬೇಸಿಗೆ ಆರಂಭದ ಜೊತೆಯಲ್ಲಿ ಕೊರೊನಾ ವೈರಾಣು ನಿಯಂತ್ರಣದಲ್ಲಿ ಅಧಿಕಾರಿಗಳು ಬ್ಯುಸಿ ಆಗಿದ್ದಾರೆ. ಅಕ್ರಮಕ್ಕೆ ಇದೇ ಸೂಕ್ತ ಸಮಯ ಎಂದು ದಂಧೆಕೊರರು ರಾಜಾರೋಷವಾಗಿ ಮರಳನ್ನು ಸಾಗಿಸುತ್ತಿರುವುದಷ್ಟೇ ಅಲ್ಲದೇ, ನಿರ್ಜನ ಪ್ರದೇಶದಲ್ಲಿ ಮರಳು ಸ್ಟಾಕ್ ಮಾಡಿರುವುದು ಕಂಡು ಬಂದಿದೆ.
ಲಾಕ್ಡೌನ್ ಆರಂಭವಾದಾಗಿನಿಂದಲೂ ಅಕ್ರಮ ಮರಳು ದಂಧೆಕೊರರು ಬ್ರೇಕ್ ಇಲ್ಲದೇ ಮರಳು ದಂಧೆ ನಡೆಸಿದ್ದಾರೆ. ತೆಲಂಗಾಣದ ಸಂಗಾರೆಡ್ಡಿ ಭಾಗದಿಂದ ಬಿಳಿ ಮರಳನ್ನು ಅಕ್ರಮವಾಗಿ ರಾಜ್ಯದ ಗಡಿ ಪ್ರವೇಶ ಮಾಡಿ ಅದನ್ನು ಭಾಲ್ಕಿ ತಾಲೂಕಿನ ಜಿರಗ್ಯಾಳ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಶೇಖರಣೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬ ಮಾಹಿತಿ ನೀಡಿದ್ದಾನೆ.
ಈ ಬಿಳಿ ಮರಳು ಸಾಮಾನ್ಯವಾಗಿ 5000 ಗೆ ಒಂದು ಬ್ರಾಸ್ (ಟ್ರ್ಯಾಕ್ಟರ್) ಸಿಗ್ತಿತ್ತು. ಆದ್ರೆ ಈಗ ಇದರ ಮಾರುಕಟ್ಟೆ ಬೆಳೆ 8 ರಿಂದ 10 ಸಾವಿರದ ವರೆಗೆ ಆಗಿದೆ. ಇಷ್ಟಾದರೂ ಈ ಮರಳು ಕಟ್ಟಡ ಕಾಮಗಾರಿಗಳಿಗೆ ಸುಲಭವಾಗಿ ಸಿಗೋದಿಲ್ಲ. ಅದಕ್ಕೆ ಅವರ ಸಂಪರ್ಕದಲ್ಲಿರುವ ಮಧ್ಯವರ್ತಿಗಳಿಂದಲೇ ಪಡೆಯಬೇಕು ಎನ್ನುತ್ತಾರೆ ಸ್ಥಳೀಯರು.