ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆಯಿಂದ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನ ಕೆಲ ಗ್ರಾಮಗಳಿಗೆ ಸಂಪರ್ಕಿಸುವ ಸೇತುವೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಶನಿವಾರ ಸಂಜೆಯಿಂದ ಭಾನುವಾರ ಬೆಳಗಿನವರೆಗೆ ಬಸವಕಲ್ಯಾಣ ಹೋಬಳಿ ವಲಯದಲ್ಲಿ 52.2 ಎಂಎಂ, ಮಳೆಯಾಗಿದ್ದು, ಹುಲಸೂರ- 21.2 ಎಂಎಂ, ಮುಡಬಿ- 24 ಎಂಎಂ, ಮಂಠಾಳ-26 ಎಂಎಂ, ಕೋಹಿನೂರ-38.5 ಎಂಎಂ ಮಳೆಯಾಗಿದೆ.
ಈ ಅವಧಿಯಲ್ಲಿ ರಾಜೇಶ್ವರ ವಲಯದಲ್ಲಿ ಮಳೆಯಾಗಿಲ್ಲ. ಶನಿವಾರ ಸಂಜೆ ನಗರ ಸೇರಿ ಸುತ್ತಲಿನ ಪ್ರದೇಶದಲ್ಲಿ ಭಾರಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಮಳೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಭಾನುವಾರ ಬೆಳಗ್ಗೆಯಿಂದ ನಗರ ಸೇರಿ ಎಲ್ಲೆಡೆ ಮೋಡ ಕವಿದ ವಾತಾವರಣದ ಜೊತೆಗೆ ಸಂಜೆವರೆಗೆ ಜಿಟಿ-ಜಿಟಿ ಮಳೆ ಮುಂದುವರೆದಿದ್ದು, ನಗರದಲ್ಲಿ ಎಂದಿನಂತೆ ರಸ್ತೆಗೆ ಜನ ಸಂಚಾರವೇ ಇರಲಿಲ್ಲ.
ಕೋಹಿನೂರ ಹಾಗೂ ಮುಡಬಿ ವಲಯ ಸೇರಿ ಇತರ ಕಡೆ ಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಮಳೆಯಿಂದಾಗಿ ತಾಲೂಕಿನ ಕೋಹಿನೂರ, ಭೋಸ್ಗಾ ಮಾರ್ಗ ಮಧ್ಯದ ಸರಜವಳಗಾ ಕ್ರಾಸ್ ಬಳಿ ಸೇತುವೆ, ಸಿರ್ಗಾಪೂರ ಬಳಿಯ ಸೇತುವೆ ಮೇಲೆ ನೀರು ಹರಿದು ಕೆಲ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾದರೆ, ಚಿತ್ತಕೋಟಾ (ಬಿ) ಲಾಡವಂತಿ ಮಧ್ಯೆಯೂ ಸೇತುವೆ ಮೇಲೆ ನೀರು ಹರಿದು ಕೆಲಕಾಲ ಸಂಚಾರಕ್ಕೆ ತೊಡಕಾಯಿತು. ನಗರದ ಬಸ್ ನಿಲ್ದಾಣದಲ್ಲಿ ಮಳೆ ನೀರು ತುಂಬಿಕೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು.