ಬೀದರ್: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಫಲವತ್ತಾಗಿ ಬೆಳೆದ ಬೆಳೆಗಳು ಜಲಾವೃತಗೊಂಡು ಅನ್ನದಾತರು ಕಂಗಾಲಾಗಿದ್ದಾರೆ.
ತಡ ರಾತ್ರಿ ಜಿಲ್ಲೆಯ ಭಾಲ್ಕಿ, ಕಮಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ಬೆಳಕೋಣಿ(ಭೋ) ಗ್ರಾಮದ ಬಳಿಯ ಔರಾದ್-ಕಮಲನಗರ ರಸ್ತೆಯ ಸೇತುವೆ ಮೇಲಿಂದ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಕಮಲನಗರ-ಸೋನಾಳ ರಸ್ತೆಯ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ರೈತರ ಬೆಳೆಗಳಿಗೆ ಅಪಾರ ಹಾನಿಯಾಗಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ 11 ಗ್ರಾಮಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಬಸವಕಲ್ಯಾಣ, ಚಿಟಗುಪ್ಪ, ಭಾಲ್ಕಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆ ನೀರು ತಗ್ಗು ಪ್ರದೇಶದ ಜನ ವಸತಿ ಪ್ರದೇಶಗಳಲ್ಲಿ ನುಗ್ಗಿದೆ.
ಮಾಂಜ್ರಾ ನದಿ ತಟದಲ್ಲಿ ನೆರೆ ಭೀತಿ:
ಜಿಲ್ಲೆಯ ಜೀವನದಿ ಮಾಂಜ್ರಾದಲ್ಲಿ ನೀರಿನ ಹರಿವು ಅಪಾಯ ಮಟ್ಟದಲ್ಲಿದ್ದು ನದಿ ತಟದ ಗ್ರಾಮಗಳಾದ ಮೇಹಕರ, ಲಖನಗಾಂವ್, ಸಾಯಗಾಂವ್, ಸೋನಾಳ, ಸಂಗಮ, ಸಾವಳಿ, ಬಳತ, ನಿಟ್ಟೂರ, ಹಾಲಹಳ್ಳಿ, ನಿಡೋದಾ, ಹೆಡಗಾಪೂರ್, ಧೂಪತ ಮಹಾಗಾಂವ್, ಬಾಬಳಿ, ಮಣಿಗೆಂಪೂರ್, ಕೌಠಾ, ಹಿಪ್ಪಳಗಾಂವ್ ಹಾಗೂ ಶ್ರೀಮಂಡಲ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.