ಬೀದರ್ : ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದ ಅವಾಂತರ ಮುಂದುವರೆದಿದ್ದು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಜನಜೀವ ಅಸ್ತವ್ಯಸ್ತಗೊಂಡಿದೆ.
ಅಂಬೇಡ್ಕರ್ ವೃತ್ತ, ಕೆಇಬಿ ಕಾಲೋನಿ, ಆದರ್ಶ ಕಾಲೋನಿ, ವಿಧ್ಯಾನಗರ, ಲಾಡಗೇರಿ, ಮಂಗಲಪೇಟ ಸೇರಿದಂತೆ ಬಹುತೇಕ ಕಡೆ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿದೆ. ಹಲವೆಡೆ ಮಳೆಯ ನೀರಿನೊಂದಿಗೆ ಚರಂಡಿ ನೀರು ಸಹ ನುಗ್ಗಿದೆ. ಇದರಿಂದ ಸ್ಥಳೀಯರು ನಗರದಸಭೆ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಕಮಲನಗರ, ಭಾಲ್ಕಿ, ಔರಾದ್, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ವರುಣ ಅಬ್ಬರಿಸಿದ್ದು ಭಾಲ್ಕಿ ತಾಲೂಕಿನ ಸಾಯಗಾಂವ್ ಸೇತುವೆ ಮುಳುಗಡೆಯಾಗಿದೆ. ಇದರಿಂದ ಸಂಚಾರಕ್ಕೆ ಅಡೆತಡೆಯಾಗಿದೆ. ಧಾರಾಕಾರ ಮಳೆಯಿಂದ ಕಮಲನಗರ ತಾಲೂಕಿನ ಬೆಳಕೋಣಿ, ಬಳತ, ಹೊಳಸಮುದ್ರ ಬಳಿಯ ಸೇತುವೆ ಮುಳುಗಡೆಯಾಗಿದೆ. ಗ್ರಾಮೀಣ ಭಾಗದ ಜನವಸತಿ ಪ್ರದೇಶದಲ್ಲಿ ನೀರು ನುಗ್ಗಿದ ಪರಿಣಾಮ ಸಾಕಷ್ಟು ಗ್ರಾಮಗಳು ಭಾಗಶಃ ಜಲಾವೃತಗೊಂಡಿವೆ. ಇದರಿಂದ ಜಿಲ್ಲೆಯಾದ್ಯಂತ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ.
ಅಪಾಯಮಟ್ಟದಲ್ಲಿ ಮಾಂಜ್ರಾ ನದಿ:
ಮಾಂಜ್ರಾ ನದಿ ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು ನದಿ ತಟದ ಗ್ರಾಮಗಳಲ್ಲಿ ನೀರು ನುಗ್ಗಿದೆ. ಭಾಲ್ಕಿ ತಾಲೂಕಿನ ಸಾಯಗಾಂವ್, ಮೇಹಕರ, ಲಖನಗಾಂವ್, ಕಮಲನಗರ ತಾಲೂಕಿನ ಸೋನಾಳ, ಖೇಡ, ಸಂಗಮ, ಬಳತ, ಹಾಲಹಳ್ಳಿ, ನಿಡೋದಾ, ಔರಾದ್ ತಾಲೂಕಿನ ಹೆಡಗಾಪೂರ್, ಮಣಿಗೆಂಪೂರ್, ಬಾಬಳಿ, ಧೂಪತ ಮಹಾಗಾಂವ್, ಕೌಠಾ, ಬೀದರ್ ತಾಲೂಕಿನ ಶ್ರೀಮಂಡಲ ಹಾಗೂ ಹಿಪ್ಪಳಗಾಂವ್ ಗ್ರಾಮಗಳಲ್ಲಿ ನೆರೆ ಭೀತಿ ಹೆಚ್ಚಾಗಿದೆ.
ಮುಂಗಾರು ಬೆಳೆಗಳು ನೀರು ಪಾಲು:
ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಸೊಯಾಬಿನ್ ಕಟಾವಿಗೆ ಬಂದಿದ್ದು ಮಳೆಯ ಅಬ್ಬರಕ್ಕೆ ನೀರು ಪಾಲಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ ಎನ್ನುವಂತಹ ಸ್ಥತಿ ನಿರ್ಮಾಣಗೊಂಡಿದೆ. ತೋಟಗಾರಿಕೆ ಬೆಳೆ ಸೇರಿದಂತೆ ಕಬ್ಬು ಕೂಡ ಮಳೆ ಅಬ್ಬರಕ್ಕೆ ನೆಲಕ್ಕುರುಳಿದೆ.