ಬಸವಕಲ್ಯಾಣ: ತಾಲೂಕಿನ ಜಾಪೂರವಾಡಿ ಗ್ರಾಮದಲ್ಲಿ ಚಿಕೂನ್ಗುನ್ಯಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಕಿಟಶಾಸ್ತ್ರ ತಜ್ಞೆ ಡಾ. ಜ್ಯೋತ್ಸ್ನಾ ಹಾಗೂ ಜಿಲ್ಲಾ ರೋಗ ವಾಹಕ ಆಶ್ರೀತ ನಿಯಂತ್ರಾಣಧಿಕಾರಿ ಡಾ. ಸಂಜೀವಕುಮಾರ ಪಾಟೀಲ್ ನೇತೃತ್ವದ ಆರೋಗ್ಯ ಇಲಾಖೆ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ಕೆಲವರಿಗೆ ಚಿಕೂನ್ಗುನ್ಯಾ ಕಾಯಿಲೆ ಕಾಣಿಸಿಕೊಂಡಿದ್ದು, ಗ್ರಾಮದ ಕೆಲ ಮನೆಗಳಿಗೆ ಭೇಟಿ ನೀಡಿದ ವೈದ್ಯರ ತಂಡ, ಆರೋಗ್ಯದ ಕುರಿತು ಮಾಹಿತಿ ನೀಡಿತು.
ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ನೀರಿನ ಸಂಗ್ರಹ ತೊಟ್ಟಿಗಳು ಸೇರಿದಂತೆ ಇತರ ವಸ್ತುಗಳಲ್ಲಿ ಸಂಗ್ರಹಗೊಂಡಿರುವ ನೀರನ್ನು ಖಾಲಿ ಮಾಡಬೇಕು. ನೀರಿನಲ್ಲಿ ಉತ್ಪತ್ತಿಯಾಗುವ ಕೀಟಗಳು ಮುಂದೆ ಸೊಳ್ಳೆಗಳಿಗೆ ಪರಿವರ್ತನೆಗೊಂಡು ಮನುಷ್ಯನಿಗೆ ಕಡಿಯುತ್ತವೆ. ಇದರಿಂದ ಚಿಕೂನ್ಗುನ್ಯಾ, ಡೆಂಘಿ, ಮಲೇರಿಯಾ ಸೇರಿದಂತೆ ಇತರ ಕಾಯಿಲೆಗಳು ಹರಡುತ್ತವೆ. ಹೀಗಾಗಿ ಮನೆಯಲ್ಲಿರುವ ನೀರು ಸಂಗ್ರಹ ಬ್ಯಾರೆಲ್, ತೊಟ್ಟಿಯನ್ನು ಕಡ್ಡಾಯವಾಗಿ ಪ್ರತಿ ವಾರ ಒಮ್ಮೆಯಾದರೂ ಸ್ವಚ್ಛಗೊಳಿಸಬೇಕು ಎಂದು ಜನರಿಗೆ ಸಲಹೆ ನೀಡಿದರು.