ಬೀದರ್: ನೂತನ ಕಮಲಗನರ ತಾಲೂಕು ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕಲಬುರಗಿ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದ ಹಿನ್ನೆಲೆ ಇಂದು ನಡೆಯಬೇಕಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ.

ಔರಾದ್ ತಾಲೂಕಿನ ವಿಭಜನೆಯಿಂದಾಗಿ ರಚನೆಯಾದ ನೂತನ ಕಮಲನಗರ ತಾಲೂಕಿಗೆ ತಾಲೂಕು ಪಂಚಾಯತಿ ಅಧ್ಯಕ್ಷ (ಪರಿಶಿಷ್ಟ ಜಾತಿ) ಹಾಗೂ ಉಪಾಧ್ಯಕ್ಷ (ಸಾಮಾನ್ಯ) ಸ್ಥಾನಕ್ಕೆ ಇಂದು ಚುನಾವಣೆ ನಡೆಯಬೇಕಿತ್ತು.
ಆದರೆ, ಔರಾದ್ ತಾಲೂಕು ಪಂಚಾಯತಿ ಅಧ್ಯಕ್ಷೆ ಸವಿತಾ ಪ್ರಕಾಶ ಪಾಟೀಲ್ (ಕಾಂಗ್ರೆಸ್) ಅವರು ನ್ಯಾಯಾಲಯದ ಮೊರೆ ಹೊಗಿದ್ದಕ್ಕೆ ಘನ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜ್ ರಂಗಾಸ್ವಾಮಿ ಅವರ ಪೀಠ ಸದರಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಇದರಿಂದ ಇಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿದೆ.
ಔರಾದ್ ತಾಲೂಕು ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕಮಲನಗರ ಸೇರಿದಂತೆ ಅಧ್ಯಕ್ಷ ಸವಿತಾ ಪಾಟಿಲ್ ಹಾಗೂ ಉಪಾಧ್ಯಕ್ಷ ನೆಹರು ಪಾಟೀಲ್ ಅವರ ಅಧಿಕಾರ ಅವಧಿ ಮೇ 2021ಕ್ಕೆ ಪೂರ್ಣಗೊಳ್ಳಲಿದ್ದು, ನಿಗದಿಯಂತೆ ಅವಧಿ ಪೂರ್ವ ಚುನಾವಣೆ ನಡೆಸುವುದು ನ್ಯಾಯ ಸಮ್ಮತವಲ್ಲ. ಹೀಗಾಗಿ, ವಿಭಜಿತ ಕಮಲನಗರ ತಾಲೂಕು ಪಂಚಾಯತಿ ಚುನಾವಣೆಗೆ ತಡೆ ನೀಡುವ ಕುರಿತು ದೂರುದಾರರ ಪರ ಖ್ಯಾತ ನ್ಯಾ. ಜೈರಾಜ್ ಬುಕ್ಕಾ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೊರ್ಟ್ ಪುರಸ್ಕರಿಸಿ ತಡೆಯಾಜ್ಞೆ ಜಾರಿಗೊಳಿಸಿದೆ ಎಂದು ದೂರುದಾರ ಸವಿತಾ ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿರುವ ಔರಾದ್ ತಾಲೂಕು ಪಂಚಾಯತಿ ನಿಗದಿಯಂತೆ ಅವಧಿ ಪೂರ್ಣಗೊಳ್ಳಬೇಕು. ಹೊಸ ತಾಲೂಕು ರಚನೆ ನಂತರ ಚುನಾವಣೆಯಾದರೆ ನಮ್ಮದೇನು ತಕರಾರಿಲ್ಲ. ಆದರೆ, ಔರಾದ್ ತಾಲೂಕು ಪಂಚಾಯತಿಗೆ ಸ್ಪರ್ಧಿಸಿದ್ದಕ್ಕೆ ಮತದಾರರು ಮತ ಹಾಕಿರುತ್ತಾರೆ. ಹೀಗೆ, ಸರ್ಕಾರ ಮಧ್ಯಂತರದಲ್ಲಿ ಮತ್ತೊಂದು ತಾಲೂಕು ರಚನೆ ಮಾಡಿ ಚುನಾಯಿತ ತಾಲೂಕು ಪಂಚಾಯತಿಯ ಆಡಳಿತ ಅಧಿಕಾರ ಮೊಟಕುಗೊಳಿಸುವುದು ಯಾವ ನ್ಯಾಯ? ಹೀಗಾಗಿ ನ್ಯಾಯಕ್ಕಾಗಿ ಮನವಿ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದೇವು ಎಂದು ಸವಿತಾ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.