ಬೀದರ್: ಬಯಲುಸೀಮೆ ಪ್ರದೇಶಗಳಲ್ಲೊಂದಾದ ಬೀದರ್ ಜಿಲ್ಲೆಯಲ್ಲಿ ಬೇಸಿಗೆ ಬಂತೆಂದರೆ ಸಾಕು ನೀರಿನ ಬವಣೆ ಹೇಳತೀರದಂತಾಗುತ್ತದೆ. ಬೇಸಿಗೆಯಲ್ಲಿ ಅದೆಷ್ಟೋ ಕೆರೆಗಳು ಬತ್ತಿ ಹೋಗುವುದುಂಟು. ಇಂತಹ ಸಮಸ್ಯೆಗಳ ನಡುವೆ ಹಾಳು ಬಿದ್ದ ಕೆರೆಗೆ ಪುನರ್ಜೀವ ನೀಡುವ ಕೆಲಸವನ್ನು ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯತ್ ಮಾಡಿದೆ. ಈ ಕಾರ್ಯಕ್ಕೆ ದೇಶದ ಪ್ರಧಾನಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, 12ನೇ ಶತಮಾನದ ಗೊಗ್ಗವ್ವೆ ಕೆರೆಗೆ ಮರುಜೀವ ಕೊಡಲಾಗಿದೆ. ಕೆರೆ ಹೊಳೆತ್ತುವುದು ಸೇರಿದಂತೆ ವಾಕಿಂಗ್ ಪಾತ್, ಉದ್ಯಾನವನ, ಬೋಟಿಂಗ್ ಸೈಟ್ ನಿರ್ಮಾಣ ಮಾಡಲಾಗಿದೆ. ಇದಕ್ಕೆ 10 ಲಕ್ಷ ರೂ. ಹಣ ವೆಚ್ಚವಾಗಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಸಿಕೊಳ್ಳಲಾಗಿದೆ.
ವಿಶ್ವ ಜಲ ಸಂರಕ್ಷಣಾ ದಿನದ ಹಿನ್ನೆಲೆ ಕೆರೆಗಳಿಗೆ ಮರುಜೀವ ನೀಡಿರುವ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್ ಅವರು ಪ್ರಧಾನಿ ಮೋದಿ ಅವರ ಜೊತೆ ಸಂವಾದ ನಡೆಸಿ 12ನೇ ಶತಮಾನದ ಗೊಗ್ಗವ್ವೆ ಕೆರೆಗೆ ಮರುಜೀವ ನೀಡಿದ ವಿಷಯದ ಮೇಲೆ ಚರ್ಚಿಸಿದ್ರು. ಈ ಕಾರ್ಯವನ್ನು ಮೆಚ್ಚಿದ ಪ್ರಧಾನಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಮತ್ತು ಗ್ರಾಮಸ್ಥರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೀದರ್ ಜಿಲ್ಲೆಯ ಗೊಗ್ಗವ್ವೆ ಕೆರೆಗೆ ಮರುಜೀವ: ಪ್ರಧಾನಿಯಿಂದ ಗ್ರಾಮಸ್ಥರಿಗೆ ಶಹಬ್ಬಾಸ್ ಗಿರಿ
ಒಟ್ಟಾರೆ ಬೇಸಿಗೆಯಲ್ಲಿ ನೀರಿನ ಬವಣೆ ಎದುರಿಸುವ ಅದೆಷ್ಟೋ ಗ್ರಾಮಗಳಿಗೆ ಜಲಮೂಲವನ್ನು ಹಿಡಿದಿಟ್ಟಿರುವ ಈ ಊರಿನ ಜನರು ಮಾದರಿಯಾಗಿದ್ದಾರೆ. ಇವರ ನಡೆ ಅನುಸರಿಸಿದರೆ ನೀರಿನ ಸಂಗ್ರಹಣೆ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು.