ಬೀದರ್: ಜಿಲ್ಲೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಎಳ್ಳ ಅಮಾವಾಸ್ಯೆ ಚರಗ ಚಲ್ಲುವ ಸಂಪ್ರದಾಯ ಸಡಗರ ಸಂಭ್ರಮದಿಂದ ನಿನ್ನೆ ನಡೆಯಿತು.
ತಾವು ನಂಬಿರುವ ಮಣ್ಣನ್ನು ದೈವಭಾವದಿಂದ ಪೂಜಿಸುವ ಆಚರಣೆ ಇದಾಗಿದೆ. ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲನ್ನು ಕೊಡುವ ಭೂಮಿ ತಾಯಿಯನ್ನು ಪೂಜಿಸಿ, ಹೊಲದ ತುಂಬೆಲ್ಲಾ ಚೀಲಗಳು ತುಂಬಿ ಹೊರಗೆ ಚೆಲ್ಲುವಷ್ಟು ಬೆಳೆ ನೀಡಲಿ ಎಂದು ಗ್ರಾಮೀಣ ಭಾಗಗಳಲ್ಲಿ ಆಚರಿಸುವ ಹಬ್ಬವೇ ಚರಗ ಚೆಲ್ಲುವುದು.
ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ. ಹೊಲಗಳಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ 'ಹುಲ್ ಹುಲ್‌ಗೋ ಚಲಾಂಬರಗೋ' ಎಂದು ಕೂಗುತ್ತಾ ಮನೆಯಿಂದ ತಂದ ಆಹಾರವನ್ನು ಹೊಲದಲ್ಲಿ ಚೆಲುತ್ತಾರೆ. ಇದನ್ನೇ ಚರಗ ಚೆಲ್ಲುವುದು ಎಂದು ಕರೆಯುತ್ತಾರೆ.
ಚರಗ ಚಲ್ಲುವ ಹಬ್ಬದ ವಿಶೇಷ: ಅಮವಾಸ್ಯೆ 3-4 ದಿನ ಇರುವಾಗಲೇ ರೈತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಹಬ್ಬದ ವಿಶೇಷವಾಗಿ ಸಜ್ಜೆ, ಜೋಳದ ರೋಟ್ಟಿ ತಯಾರಿಸುವುದು, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಮತ್ತು ಶೇಂಗಾದ ಹೋಳಿಗೆ ತಯಾರಿಸಲಾಗುತ್ತದೆ.
ಅಮಾವಾಸ್ಯೆ ದಿನ ಬೆಳಗ್ಗೆ ಎದ್ದ ರೈತರು ಮೊದಲು ಬಂಡಿ ಸಿದ್ಧಗೊಳಿಸಿಕೊಳ್ಳುತ್ತಾರೆ. ನಂತರ ಮನೆಯಲ್ಲಿ ಮಾಡಿದ್ದ ಬಗೆ ಬಗೆಯ ಸಿಹಿಯನ್ನು ದೊಡ್ಡ ಬುತ್ತಿಯಲ್ಲಿ ಕಟ್ಟಿಕೊಂಡು, ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವುದು ದೊಡ್ಡ ಸಡಗರದಂತೆ ಕಾಣುತ್ತದೆ. ಜತೆಗೆ ತಮ್ಮ ಸಂಬಂಧಿಗಳು, ಊರಿನ ಇತರರು, ಹಿತೈಷಿಗಳನ್ನು ಹೊಲಕ್ಕೆ ಕರೆದೊಯ್ದು, ಚರಗ ಚೆಲ್ಲಿದ ನಂತರ ಹೊಲದಲ್ಲೇ ಸಾಮೂಹಿಕ ಊಟ ಸವಿದು ಆತ್ಮೀಯತೆ ಮೆರೆಯುತ್ತಾರೆ. ಹೊಲಗಳಿಂದ ಬಂದ ನಂತರ ಕಾಮ ದಹನ ನಡೆಯಿತು. ಇದು ಕೆಲವು ಕಡೆ ಮಾತ್ರ ಆಚರಣೆಯಲ್ಲಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಎಳ್ಳ ಅಮಾವಾಸ್ಯೆ ಸಂಭ್ರಮ... ಭೂತಾಯಿಗೆ ವಿಶೇಷ ಪೂಜೆ