ಬೀದರ್: ನರೇಗಾ ಕಾಮಗಾರಿ ಬಿಲ್ ಪಾವತಿಗೆ ಲಂಚ ಕೇಳುತ್ತಿದ್ದ ಗ್ರಾಮ ಪಂಚಾಯತ್ ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತ ಲಂಚದ ರೂಪದಲ್ಲಿ ತನ್ನ ಬಳಿ ಇರುವ ಎರಡು ಎತ್ತುಗಳನ್ನು ನೀಡಲು ಮುಂದಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು ಪಂಚಾಯತ್ ಕಚೇರಿ ಮುಂದೆ ಸೋಮವಾರ ನಡೆದಿದೆ. ಪ್ರಶಾಂತ ಬಿರಾದಾರ ತಮ್ಮ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾದ ರೈತ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲು ಸರ್ಕಾರದಿಂದ ಒಂದು ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಒಂದು ಲಕ್ಷದ ಅನುದಾನ ಪೈಕಿ ಗ್ರಾಮ ಪಂಚಾಯತ್ ಅಧಿಕಾರಿಗಳು ಕೇವಲ 55 ಸಾವಿರ ಹಣವನ್ನು ರೈತನಿಗೆ ನೀಡಿ, ಉಳಿದ 45 ಸಾವಿರ ಹಣ ನೀಡುವಂತೆ ಗ್ರಾ.ಪಂ ಅಧಿಕಾರಿ ಲಂಚ ಕೇಳಿದ್ದರು. ಇದರಿಂದ ಬೇಸತ್ತು ಇಂದು ತಮ್ಮ ಎರಡು ಎತ್ತುಗಳ ಸಮೇತ ತಾಲೂಕು ಪಂಚಾಯತ್ ಆಗಮಿಸಿ ಲಂಚದ ರೂಪದಲ್ಲಿ ಈ ಎರಡು ಎತ್ತು ತೆಗೆದುಕೊಂಡು ಉಳಿದ 45 ಸಾವಿರ ಹಣ ನೀಡಿ ಎಂದು ರೈತ ಅಧಿಕಾರಿಗಳ ಬಳಿ ಮನವಿ ಮಾಡಿರುವುದಾಗಿ ರೈತ ಪ್ರಶಾಂತ್ ಹೇಳಿದ್ದಾರೆ.
ಈ ಘಟನೆಯಿಂದ ಕೆಲ ಕಾಲ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮುಜುಗರ ಉಂಟಾಯಿತು. ಸುದ್ದಿ ತಿಳಿದ ತಾಲೂಕು ಪಂಚಾಯತ್ ಎಡಿ ಸಂತೋಷ ಚವ್ಹಾಣ್ ಅವರು ಸ್ಥಳಕ್ಕೆ ಆಗಮಿಸಿ ರೈತನಿಗಿ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ಮನೆಗೆ ಕಳಿಸಿದ್ದಾರೆ.
ಇದನ್ನೂ ಓದಿ : 'ಅಧಿಕಾರಿಗಳಿಗೆ ಲಂಚ ನೀಡಲು ಆಗುತ್ತಿಲ್ಲ': ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ
ಹಾವೇರಿಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ: ಇತ್ತೀಚೆಗೆ ಲಂಚ ಕೇಳಿದ ಅಧಿಕಾರಿಗಳಿಗೆ ಎತ್ತು ನೀಡಲು ರೈತರೊಬ್ಬರು ಮುಂದಾಗಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದ ಘಟನೆ ಹಾವೇರಿ ಜಿಲ್ಲೆ ಸವಣೂರು ಪುರಸಭೆಯಲ್ಲಿ ನಡೆದಿತ್ತು. ಯಲ್ಲಪ್ಪ ರಾಣೋಜಿ ಎಂಬ ರೈತ, ಸಾರ್.., ನನ್ನ ಬಳಿ ನೀವು ಕೇಳಿದಷ್ಟು ಕೊಡೋಕೆ ದುಡ್ಡಿಲ್ಲ. ಇದರ ಬದಲು ಒಂದು ಎತ್ತು ತೆಗೆದುಕೊಳ್ಳಿ ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಲಂಚ ಕೇಳಿದ್ದ ಪುರಸಭೆ ಅಧಿಕಾರಿಗಳಿಗೆ ಬಾರುಕೋಲು ಮತ್ತು ಎತ್ತು ನೀಡಲು ಈತ ಮುಂದಾಗಿದ್ದರು.
ಮನೆ ಖಾತೆ ಬದಲಾಯಿಸಲು ಹಣ ಕೊಡುವಂತೆ ಅಧಿಕಾರಿಗಳು ಕೇಳಿದ್ದರು. ಈ ಹಿಂದೆ 25 ಸಾವಿರ ರೂ ಹಣ ಪಡೆದ ಅಧಿಕಾರಿಗಳು ಟ್ರಾನ್ಸ್‌ಫರ್ ಆಗಿದ್ದಾರೆ. ಈಗ ಹೊಸದಾಗಿ ಬಂದವರು ಮತ್ತೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಆತ ಅಸಹಾಯಕತೆ ವ್ಯಕ್ತಪಡಿಸಿದ್ದನು. ಹೀಗಾಗಿ, ದುಡ್ಡು ಕೊಡುವ ತನಕ ಎತ್ತು ಇಟ್ಕೊಳಿ ಎಂದು ಹೇಳಿ ಪುರಸಭೆಯ ಮುಂದೆ ರೈತ ಯಲ್ಲಪ್ಪ ತಮ್ಮ ಎತ್ತುಗಳನ್ನು ತಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಆಗ ಎಚ್ಚತ್ತುಕೊಂಡಿದ್ದ ಅಧಿಕಾರಿಗಳು ಬಾಕಿ ಇದ್ದ ರೈತನ ಕೆಲಸವನ್ನು ಮಾಡಿಕೊಟ್ಟಿದ್ದರು.
ಇದನ್ನೂ ಓದಿ : ಲೋಕಾಯುಕ್ತ ಕಚೇರಿಯಲ್ಲೇ ರಾತ್ರಿ ಕಳೆದ ಮಾಡಾಳ್ ವಿರೂಪಾಕ್ಷಪ್ಪ