ಬೀದರ್: ಐದುನೂರು ಮುಖ ಬೆಲೆಯ ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿದ ಇಲ್ಲಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 1.37 ಲಕ್ಷ ರೂ. ಮೌಲ್ಯದ ಖೋಟಾ ನೋಟುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಗಾಂಧಿ ಗಂಜ್ನಲ್ಲಿ ಖೋಟಾ ನೋಟು ನೀಡಿ ಸಾರಾಯಿ ತರಲು ಮುಂದಾದಾಗ ರಾಕೇಶ್ ಹಾಗೂ ಶರತ್ ಎಂಬಾತರನ್ನು ಪೊಲೀಸರು ಜಾಲ ಬೀಸಿ ಬಂಧಿಸಿದ್ದಾರೆ. ಈ ವೇಳೆಯಲ್ಲಿ ಬಂಧಿತ ಅರೋಪಿಗಳಿಂದ 247 ಐದುನೂರು ಮುಖ ಬೆಲೆಯ ಖೋಟಾ ನೋಟು, ಪ್ರಿಂಟರ್ ಹಾಗೂ ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.
ಈ ದಂಧೆಯಲ್ಲಿ ಮೈಲೂರು ನಿವಾಸಿ ಅಶೋಕ್, ಬೋರಗಿ ಗ್ರಾಮದ ಸೈಯ್ಯದ ಇಬ್ರಾಹಿಂ, ಬಿರಿ ಗ್ರಾಮದ ಉಮಾಕಾಂತ ಹಾಗೂ ಅಳವಾಯಿ ಗ್ರಾಮದ ಜಾವೇದ್ ಭಾಗಿಯಾಗಿದ್ದು, ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಖೋಟಾ ನೋಟನ್ನು ಹಂತ ಹಂತವಾಗಿ ಮಾರುಕಟ್ಟೆಯಲ್ಲಿ ಚಲಾಯಿಸಿದ್ದು, ಇಲ್ಲಿಯವರೆಗೆ ಅಂದಾಜು 20 ಲಕ್ಷ ರೂ. ಚಲಾಯಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ತಿಳಿಸಿದ್ದಾರೆ.