ಬೀದರ್: ಎರಡು ವರ್ಷಗಳಿಂದ ಹದಗೆಟ್ಟ ಎಕಂಬಾ-ಮುರ್ಕಿ ರಸ್ತೆ ದುಸ್ಥಿತಿಯಿಂದಾಗಿ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿದ್ದು, ಇದೀಗ ಸಾರ್ವಜನಿಕರಿಗೆ ತೊಂದರೆಯಿಂದ ಮುಕ್ತಿ ಸಿಕ್ಕಿದೆ.
ಔರಾದ್ ತಾಲೂಕಿನ ಎಕಂಬಾ-ಮುರ್ಕಿ ರಾಜ್ಯ ಹೆದ್ದಾರಿ 122 ಸಂಪೂರ್ಣವಾಗಿ ಗುಂಡಿಗಳಾಗಿ ನಿರ್ಮಾಣವಾಗಿ ಈ ರಸ್ತೆಯಲ್ಲಿ ಪ್ರಯಾಣಿಸುವ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದರು. ರಸ್ತೆ ಗುಂಡಿಯಲ್ಲಿ ಬಿದ್ದು ಮೂವರು ಬೈಕ್ ಸವಾರರು ಗಾಯಗೊಂಡಿದ್ದರು. ಈ ಕುರಿತು 'ಈ ಟಿವಿ ಭಾರತ' ಗುಂಡಿಗಳ ನಡುವೆಯ ರಸ್ತೆಯೋ, ರಸ್ತೆ ನಡುವೆ ಗುಂಡಿಗಳೋ...! ಎಂಬ ತಲೆ ಬರಹದಡಿಯಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ವರದಿ ಗಮನಿಸಿದ ಲೋಕೊಪಯೋಗಿ ಒಳನಾಡು ಮತ್ತು ಬಂದರು ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಎಕಂಬಾದಿಂದ ಡೊಂಗರಗಾಂವ್ ವರೆಗೆ ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಹದಗೆಟ್ಟ ರಸ್ತೆ ಅಗೆದು ಹೊಸ ರಸ್ತೆ ಮಾಡ್ತಿರುವ ಇಲಾಖೆ ಕೆಲಸವನ್ನು ಕಂಡ ಸ್ಥಳೀಯರು, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಈಟಿವಿ ಭಾರತ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.