ಬೀದರ್: ಯೋಧರೊಬ್ಬರ ಮನೆಗೆ ಜೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದ ಕುರಿತು 'ಈಟಿವಿ ಭಾರತ' ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಕೊನೆಗೂ ಹೊಸ ವಿದ್ಯುತ್ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದು, ವರದಿಗೆ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಜಿಲ್ಲೆಯ ಕಮಲನಗರ ತಾಲೂಕಿನ ತೊರಣಾ ಗ್ರಾಮದ ನಿವಾಸಿ ಭಾರತೀಯ ಸಶಸ್ತ್ರ ಪಡೆಯ ಯೋಧ ಕಾಳಿದಾಸ ಗೌಳಿ ಎಂಬಾತರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಜೆಸ್ಕಾಂ ಎರಡು ವರ್ಷಗಳಿಂದ ವಿಳಂಬ ಮಾಡಿತ್ತು. ನಿತ್ಯ ಈ ಯೋಧನ ಪೋಷಕರು ಕತ್ತಲೆಯಲ್ಲಿ ಬದುಕುವಂತಾಗಿತ್ತು. ಈ ಕುರಿತು 'ಈಟಿವಿ ಭಾರತ' ನಲ್ಲಿ ''ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ'' ಎಂಬ ತಲೆ ಬರಹದಡಿಯಲ್ಲಿ ವರದಿ ಪ್ರಸಾರ ಮಾಡಿತ್ತು.
ವರದಿಗೆ ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು ಯೋಧನ ಮನೆಗೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ, ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಈ ಕುರಿತು ಯೋಧ ಕಾಳಿದಾಸ ಗೌಳಿ ಸಂತಸ ವ್ಯಕ್ತಪಡಿಸಿದ್ದು, 2 ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲಾಗದೇ ಪರಿತಪಿಸುತ್ತಿದ್ದೆವು. ಈಗ ಮಾಧ್ಯಮದವರು ವರದಿ ಮಾಡಿದ ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. ಇದಕ್ಕಾಗಿ ಮಾಧ್ಯಮದವರು ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.