ಬೀದರ್: ಕಳೆದ ಒಂದು ವಾರದಿಂದ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿದ್ದು, ರಾಜ್ಯದಲ್ಲಿ ಮಾಂಜ್ರಾ ನದಿ ತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಮಾಂಜ್ರಾ ಹಾಗೂ ತೆರ್ನಾ ಜಲಾಶಯ ನಿಗದಿತ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭ ಜಲಾಶಯದ ಗೇಟ್ ಗಳ ಮೂಲಕ ನೀರನ್ನು ಹೊರ ಹಾಕಲಾಗುವುದು. ಇದರಿಂದ ಜಿಲ್ಲೆಯ ಭಾಲ್ಕಿ ಹಾಗೂ ಔರಾದ್ ತಾಲೂಕಿನ ಗ್ರಾಮಗಳ ನದಿ ತೀರದ ನಿವಾಸಿಗರು ಸಂಕಷ್ಟಕ್ಕೆ ಸಿಲುಕಬಾರದು. ಅಲ್ಲಿನ ಸ್ಥಳೀಯ ಆಡಳಿತ ಬೀದರ್ ಜಿಲ್ಲಾಢಳಿತಕ್ಕೆ ಮೂನ್ಸೂಚನೆ ನೀಡಿದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರು ಆಯಾ ತಹಶೀಲ್ದಾರರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಮೆಹಕರ, ಸಾಯಗಾಂವ್, ಲಖನಗಾಂವ್, ನಿಟ್ಟೂರು, ಔರಾದ್ ತಾಲೂಕಿನ ಖೇಡ್, ಸಂಗಮ, ಸಾವಳಿ, ಹುಲಸೂರು, ಬಳತ, ಹಾಲಹಳ್ಳಿ, ನಿಡೊದಾ, ಹೆಡಗಾಪೂರ್, ಧೂಪತಮಹಗಾಂವ್, ಬಾಬಳಿ, ಮಣಿಗೆಂಪೂರ್, ಕೌಠಾ, ಕಂದಗೂಳ, ಬೀದರ್ ತಾಲೂಕಿನ ಶ್ರೀಮಂಡಲ, ಹಿಪ್ಪಳಗಾಂವ್ ಸೇರಿದಂತೆ ನದಿ ತಟದ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.