ಬಸವಕಲ್ಯಾಣ: ರೈತರ ಸಮಸ್ಯೆಗಳ ಬಗ್ಗೆ ಸಂಸದರು ಮತ್ತು ಸಚಿವರ ಜೊತೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಭರವಸೆ ನೀಡಿದರು.
ನಗರದ ಬಿಕೆಡಿಬಿ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಹಾಗೂ ಸಂಘಟನೆಗಳ ಪ್ರಮುಖರಿಂದ ಈಗಾಗಲೇ ಮಾಹಿತಿ ಪಡೆದುಕೊಳ್ಳಲಾಗಿದೆ. ಸ್ಥಳೀಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ರೈತ ಸಂಘಟನೆಗಳ ಪದಾಧಿಕಾರಿಗಳು ತಾಳ್ಮೆ ವಹಿಸಬೇಕು ಎಂದು ಮನವಿ ಮಾಡಿದರು.
ಸಂಸದ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಅವರು ಅಧಿವೇಶನಗಳಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಸ್ಥಳೀಯವಾಗಿ ಲಭ್ಯವಿಲ್ಲ. ಸಚಿವರು ಮತ್ತು ಸಂಸದರು ಬೀದರ್‌ಗೆ ಬಂದ ಮೇಲೆ ಅವರೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಇರುವ ಬೇಡಿಕೆಗಳ ಈಡೇರಿಕೆಗಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಆಗಸ್ಟ್ ತಿಂಗಳಿಗೂ ಮುನ್ನ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸೆ. 11ರಿಂದ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ರೈತರ ಬೆಳೆಗಳು ನಷ್ಟವಾಗಿದ್ದು, ಈಗಾಗಲೇ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಮೀಕ್ಷೆ ಮುಗಿದ ನಂತರ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿಗಾಗಿ ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.