ಬೀದರ್: ಕೋವಿಡ್ -19 ವೈರಸ್ ಸೊಂಕು ನಿಯಂತ್ರಣಕ್ಕೆ ರಾಮಬಾಣವಾಗಿರುವ ಸಾಮಾಜಿಕ ಅಂತರ ಕಾಪಾಡುವಲ್ಲಿ ಭಾಲ್ಕಿ ಜನರು ಮಾದರಿಯಾಗಿದ್ದಾರೆ.
ಒಂದು ಬೀದಿ ಅಂಗಡಿ ಮುಂದೆ ಒಬ್ಬರೆ ತರಕಾರಿ ಖರೀದಿ ಮಾಡುವ ಮೂಲಕ ಲಾಕ್ಡೌನ್ ಮೂಲ ಉದ್ದೇಶವನ್ನು ಯಥಾವತ್ತಾಗಿ ಪಾಲನೆ ಮಾಡಿರುವುದು ಕಂಡು ಬಂದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣದ ಬಸ್ ನಿಲ್ದಾಣವನ್ನು ತಾತ್ಕಾಲಿಕ ತರಕಾರಿ ಮಾರುಕಟ್ಟೆಯಾಗಿ ಪರಿವರ್ತಿಸಲಾಗಿದೆ. ಸ್ಥಳೀಯ ಡಿವೈಎಸ್ಪಿ ಡಾ. ದೇವರಾಜ್ ಬಿ ಅವರ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳು ಸಾಮಾಜಿಕ ಅಂತರ ಕಾಪಾಡುವ ಮೂಲಕ ವ್ಯಾಪಾರ ಮಾಡ್ತಿರುವುದು ಎಲ್ಲರ ಗಮನ ಸೆಳೆದಿದೆ.
ಖಾಲಿ ಇರುವ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ತರಕಾರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ ತರಕಾರಿ ಅಂಗಡಿ ಮುಂದೆ ಬರುವ ಜನರು ಬಿಳಿ ಬಣ್ಣದ ರೌಂಡ್ ಮಾರ್ಕ್ನಲ್ಲಿ ನಿಲ್ಲಬೇಕಾಗಿದೆ. ಒಬ್ಬರಾದ ಮೇಲೆ ಮತ್ತೊಬ್ಬರು ತರಕಾರಿ ಖರಿದಿಸಬೇಕು. ಜನಜಂಗುಳಿಯಾಗದಂತೆ ಸ್ಥಳೀಯ ಪೊಲೀಸರೇ ನಿಗಾ ವಹಿಸ್ತಿದ್ದಾರೆ.