ಬೀದರ್: ಮದುವೆಯಾಗಿ ವರ್ಷ ಕಳೆಯುವ ಮೊದಲೇ ದಂಪತಿ ಡೆತ್ನೋಟ್ ಬರೆದಿಟ್ಟು, ಮನೆಯಲ್ಲೇ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ನಡೆದಿದೆ.
ಯನಗುಂದಾ ಗ್ರಾಮದ ಮಹೇಶ್ ಸಜ್ಜನಶೆಟ್ಟಿ (25) ಹಾಗೂ ವಿಜಯಲಕ್ಷ್ಮಿ(22) ಇಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಗರ್ಭಿಣಿಯಾಗಿದ್ದ ವಿಜಯಲಕ್ಷ್ಮಿ, ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡ ನಂತರ ತಾನೂ ಕೂಡ ಮನೆಯಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಔರಾದ್ ತಾಲೂಕಿನ ಜೋಜನಾ ಗ್ರಾಮದ ರಾಜಪ್ಪ ಚಿದಕೆ ಎಂಬಾತ ವಿಜಯಲಕ್ಷ್ಮಿ ಹಾಗೂ ಮಹೇಶ್ಗೆ ಫೋನ್ ಮಾಡಿ ಕಿರಿ ಕಿರಿ ನೀಡಿದ್ದಾನೆ. ಅಲ್ಲದೆ ನಿನ್ನೆ ಮಧ್ಯಾಹ್ನ ಮಹೇಶ್ಗೆ ಫೋನ್ ಮಾಡಿ, ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಎನ್ನಲಾಗ್ತಿದೆ. ನಂತರ ಮನೆಗೆ ಬಂದ ಮಹೇಶ್, ಹೆಂಡತಿ ಜತೆ ಜಗಳವಾಡಿದ್ದ. ಕೋಪದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡನ ಸಾವಿನ ಸುದ್ದಿ ತಿಳಿದ ವಿಜಯಲಕ್ಷ್ಮಿ ಕೂಡ ಡೆತ್ ನೋಟ್ ಬರೆದಿಟ್ಟು ತನ್ನ ಸಾವಿಗೆ ಜೋಜನಾ ಗ್ರಾಮದ ರಾಜಪ್ಪ ಎನ್ನುವವನು ಕಾರಣ ಎಂದು ಹೇಳಿ ಬಾರದ ಲೋಕಕ್ಕೆ ತೆರಳಿದ್ದಾನೆ.
ಗಂಡ-ಹೆಂಡತಿಯ ನಡುವೆ ಮೂರನೇ ವ್ಯಕ್ತಿ ವಿನಾಕಾರಣ ಸಂಶಯ ಹುಟ್ಟಿಸಿದ ಪರಿಣಾಮ ಈ ದುರಂತ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.