ಬೀದರ್: ನಾಗರ ಪಂಚಮಿ ಹಬ್ಬವನ್ನು ಮನೆಯಲ್ಲೇ ಆಚರಣೆ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಪವಿತ್ರ ಸೀಮಿ ನಾಗಣ್ಣ ದೇವಸ್ಥಾನದ ದರ್ಶನಕ್ಕೂ ಬ್ರೇಕ್ ಹಾಕಲಾಗಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಸುಪ್ರಸಿದ್ಧ ಸೀಮಿ ನಾಗಣ್ಣ ದೇವಸ್ಥಾನ ಈ ವರ್ಷ ಕೊರೊನಾ ಹೊಡೆತಕ್ಕೆ ಬಾಗಿಲು ಮುಚ್ಚಿಕೊಂಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ನಾಗರ ಪಂಚಮಿ ಹಬ್ಬದಂದು ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಸೀಮಿ ನಾಗಣ್ಣ ದೇವರ ಸನ್ನಿಧಿಗೆ ಬಂದು ಆರಾಧನೆ ಮಾಡುತ್ತಿದ್ದರು. ಪ್ರತಿ ವರ್ಷ ನಾಗರ ಪಂಚಮಿ ಹಬ್ಬದಂದು ಅಪಾರ ಸಂಖ್ಯೆಯ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನ ಈ ವರ್ಷ ಕೊರೊನಾ ಹೊಡೆತಕ್ಕೆ ಬಿಕೋ ಎನ್ನುತ್ತಿದೆ.