ಬೀದರ್ : ಕೊರೊನಾ ವೈರಸ್ ಹಾವಳಿ ತಡೆಗಟ್ಟುವ ವಿಚಾರದಲ್ಲಿ ಅಧಿಕಾರಿಗಳು ಸಭೆಯಲ್ಲಿ ವಿಶ್ಲೇಷಣೆ ಮಾಡಿ ಸುಮ್ಮನಿರದೆ ಅದನ್ನು ಹಳ್ಳಿ ಹಳ್ಳಿಯಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತಡ ರಾತ್ರಿವರೆಗೆ ಸಭೆ ನಡೆಸಿ, ಕೊರೊನಾ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಅದ್ಭುತವಾಗಿವೆ. ಅವುಗಳು ಬರೀ ಕೊಠಡಿಗೆ ಸೀಮೀತವಾಗಿರದೆ ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಜನರಲ್ಲಿ ಜಾಗೃತಿ ಮೂಡಿಸಲು ಉಪಯೋಗಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು, ಕೆಮ್ಮು, ಜ್ವರ, ನೆಗಡಿಯಂತಹ ಸಾಮಾನ್ಯ ರೋಗಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ವೈದ್ಯರು ಆಸ್ಪತ್ರೆಯಲ್ಲಿ ಲಭ್ಯ ಇರಬೇಕು. ನಿರ್ಲಕ್ಷ್ಯ ಮಾಡಿದರೆ ಸರ್ಕಾರ ಸುಮ್ಮನಿರಲ್ಲ ಎಂದು ಅಧಿಕಾರಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಸೋಂಕು ಹರಡಲು ಆರಂಭವಾದ್ರೆ ತಡೆಗಟ್ಟೊದು ಅಷ್ಟು ಸುಲಭವಲ್ಲ. ಆದ್ರು ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಇರುವ ಮುನ್ನೆಚ್ಚರಿಕೆ ಕ್ರಮವಹಿಸಿಕೊಂಡ್ರೆ ಯಾವುದೇ ಅಪಾಯವಿಲ್ಲ ಎಂದು ಸಚಿವ ಚವ್ಹಾಣ ಹೇಳಿದರು.