ಬಸವಕಲ್ಯಾಣ: ಮಾರಕ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶಗಳನ್ನು ಪಾಲಿಸಬೇಕು. ಜೊತೆಗೆ, ಜಿಲ್ಲಾಡಳಿತದ ಕ್ರಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸಾರ್ವಜನಿಕರಲ್ಲಿ ಶಾಸಕ ಬಿ. ನಾರಾಯಣ ರಾವ್ ಮನವಿ ಮಾಡಿದರು.
ತಾಲೂಕಿನ ಧನ್ನೂರಾ(ಕೆ) ಗ್ರಾಮದಲ್ಲಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ರಾಜೀವ ಗಾಂಧಿ ಸೇವಾ ಕೇಂದ್ರ ಹಾಗೂ ಗ್ರಾಪಂ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಾವಶ್ಯಕವಾಗಿದ್ದು, ಎಲ್ಲರೂ ಒಮ್ಮತದಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವೈಯಕ್ತಿಕ ಮತ್ತು ಕುಟುಂಬದ ಸುರಕ್ಷತೆಯ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಅವಶ್ಯಕವಷ್ಟೇ ಅಲ್ಲ ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಮುಂಬೈ, ಹೈದರಾಬಾದ್ ಸೇರಿದಂತೆ ಹೊರ ರಾಜ್ಯ ಮತ್ತು ಮಹಾನಗರಗಳಿಂದ ಯಾರೇ ಗ್ರಾಮಗಳಿಗೆ ಬಂದರೆ ಅವರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾಹಿತಿ ನೀಡಬೇಕು. ಈ ಸಂಬಂಧ ಸರ್ವೆ ಮಾಡಲು ಮನೆಗಳಿಗೆ ಬರುವ ಆಶಾ ಕಾರ್ಯಕರ್ತರು ಹಾಗೂ ಇತರ ಸಿಬ್ಬಂದಿಗೆ ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕು. ಹೊರ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.