ಬೀದರ್: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಸರ್ಕಾರ ನಿಂತಿದೆ. ಈ ನಡುವೆ ಜನರ ದಿಕ್ಕು ತಪ್ಪಿಸುವ ಮೂಲಕ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಪ್ರಾಕೃತಿಕ ವಿಕೋಪಗಳು ಎದುರಾಗಿವೆ. ಪ್ರವಾಹ, ಕೊರೊನಾ ಪರಿಸ್ಥಿತಿಗಳನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಮರ್ಥವಾಗಿ ಎದುರಿಸಿದೆ. ನೆರೆ ಪರಿಹಾರಕ್ಕೆ 1500 ಕೋಟಿ ರೂಪಾಯಿ ಹಾಗೂ ಕೊರೊನಾ ನಿರ್ವಹಣೆಗೆ 1600 ಕೋಟಿ ರೂಪಾಯಿ ಪರಿಹಾರ ನೀಡಿದೆ ಎಂದರು.
ಅಲ್ಲದೆ ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಸರ್ಕಾರ ನಿಂತಿದೆ. ಈ ನಡುವೆ ದಿಶಾ ಭೂಲ್ ರಾಜಕೀಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮಗಳಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಮೊದಲು ತಬ್ಲಿಘಿಗಳಿಂದ ತೊಂದರೆ ಆಯ್ತು, ಈಗ ಮಹಾರಾಷ್ಟ್ರದಿಂದ ವಾಪಸ್ಸಾದವರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೊರಗಿನಿಂದ ಬಂದವರಿಗೆ ಕಠಿಣವಾದ ಕ್ವಾರೆಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಅರಹಂತ ಸಾವಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.