ಬೀದರ್ :12ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಕ್ರಾಂತಿ ಮಾಡಿದ ಮೂಲ ಸ್ಥಳ ಬೀದರ್. ವಿಶ್ವದ ಪ್ರಥಮ ಸಂಸತ್ ಬಸವಕಲ್ಯಾಣದ ಅನುಭವ ಮಂಟಪ ಇಲ್ಲಿದೆ. ಜೊತೆಗೆ ಬಸವೇಶ್ವರರ ವಿಚಾರಧಾರೆ ಬೀಜಾಂಕುರವಾಗಿದ್ದು ಈ ಜಿಲ್ಲೆಯಲ್ಲಿ. ಇಂತಹ ಪ್ರಸಿದ್ಧ ಬೀದರ್ ಜಿಲ್ಲೆಯಲ್ಲಿ ಎಲ್ಲ ಭಾಷಿಕರು ಪ್ರೀತಿ ವಿಶ್ವಾಸದಿಂದ ಇರುವುದು ಭಾಷಾ ಸಾಮರಸ್ಯದ ಸಂಕೇತವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶಂಸಿದರು.
ಜಿಲ್ಲೆಯಲ್ಲಿ ನಡೆದ ಬೀದರ್ ಉತ್ಸವ-2023ರ ನಿಮಿತ್ತ ಬೀದರ್ ಕೋಟೆ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮನ್ನೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿ ಬಹಳ ಸಂತೋಷವಾಗಿದೆ. ಕಳೆದ ಒಂದು ವಾರದಿಂದ ಬೀದರ್ ಜಿಲ್ಲೆಯ ಸಂಸ್ಕೃತಿ, ಕಲೆ, ಸಾಹಿತ್ಯ, ಕೃಷಿ ಎಲ್ಲಾ ಪ್ರದರ್ಶನಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದೀರಿ. ನಿಮಗೆ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ರಾಜ್ಯದ ಮುಕಟ ಪ್ರಾಯವಾಗಿರುವ ಬೀದರ್ ಜಿಲ್ಲೆಯು ಐತಿಹಾಸಿಕವಾಗಿ ಪ್ರಸಿದ್ದವಾಗಿದೆ. ಇಲ್ಲಿನ ಸಂಸ್ಕೃತಿ, ನಾಡು ನುಡಿ ಎಲ್ಲವೂ ವಿಶಿಷ್ಟವಾಗಿದೆ ಇದೇ ವೇಳೆ ಹೇಳಿದರು. ಈ ಎಲ್ಲಾ ಪರಂಪರೆಯನ್ನು ಹಿರಿಯ ಮಠಾಧೀಶರು, ಸಾಹಿತಿಗಳು, ಜನನಾಯಕರು ಕಾಪಾಡಿಕೊಂಡು ಬಂದಿದ್ದಾರೆ. ನಾಗರೀಕತೆಗೂ ಮತ್ತು ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದ್ದು, ವಿಶೇಷವಾಗಿ ನಮ್ಮ ಮೂಲ ನಾಗರೀಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.
ಬೀದರ್ ಉತ್ಸವ ಆರೇಳು ವರ್ಷಗಳ ನಂತರ ನಡೆಯುತ್ತಿರುವುದರಿಂದ ತಾವೆಲ್ಲರೂ ಆತ್ಮವಿಶ್ವಾಸದಿಂದ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿರುತ್ತಿರಿ. ನಮ್ಮ ಇತಿಹಾಸ, ಪರಂಪರೆ ಉಳಿಸಿಕೊಂಡು ಹೋಗುವಂತಹ ಕೆಲಸ ಈ ಉತ್ಸವದಿಂದ ಮತ್ತೊಮ್ಮೆ ಸ್ಥಾಪನೆಯಾಗಿದೆ. ಈ ಮೂಲಕ ನಾವೆಲ್ಲರೂ ಒಂದೇ ಎನ್ನುವ ಭಾವನೆ ಈ ಉತ್ಸವದಿಂದ ಮೂಡಿದೆ. ಜಿಲ್ಲೆಯ ಕಲಾವಿದರಿಗೆ ಉತ್ಸವ ಬಹಳ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆಯಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಖ್ಯಾತ ಕಲಾವಿದರು, ಸಿನಿಮಾ ರಂಗದ ಕಲಾವಿದರು ಭಾಗವಹಿಸುವುದು ಸಂತೋಷ ತಂದಿದೆ ಎಂದರು.
ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ : ಇನ್ನು ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಭಾಲ್ಕಿ ತಾಲೂಕಿನ ಮೆಹಕರ ಏತ ನೀರಾವರಿಗೆ, ಔರಾದ ತಾಲೂಕಿನ 36 ಕೆರೆಗಳ ಯೋಜನೆಗೂ ಮಂಜೂರಾತಿ ನೀಡಲಾಗಿದ್ದು, ಸದ್ಯದಲ್ಲೇ ಯೋಜನೆಗೆ ಅಡಿಗಲ್ಲು ಹಾಕಲಾಗುವುದು ಎಂದರು. ಮುಲ್ಲಾಮಾರಿ ಮೇಲ್ದಂಡೆ ಮತ್ತು ಮುಲ್ಲಾಮಾರಿ ಕೆಳದಂಡೆ, ಕಾರಂಜಾ ಯೋಜನೆ, ಹಿನ್ನೀರಿನ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗೂ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಕೈಗಾರಿಕೆ ಉದ್ದಿಮೆದಾರರ ಶೃಂಗಸಭೆ : ಜಿಲ್ಲೆಯ ಎರಡು ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಸಹಾಯ ಮಾಡಲಾಗಿದೆ. ಜಿಲ್ಲೆಗೆ ಕೈಗಾರಿಕೆಗಳು ಇನ್ನು ದೊಡ್ಡ ಪ್ರಮಾಣದಲ್ಲಿ ಬರಬೇಕು. ಪ್ರಾರಂಭದಲ್ಲಿ ಬಂದಂತಹ ಕೈಗಾರಿಕೆ ಈಗ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕೆ ಉದ್ದಿಮೆದಾರರ ಶೃಂಗ ಸಭೆಯನ್ನು ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇದೇ ಸಂದರ್ಭದಲ್ಲಿ ಬೀದರ ಉತ್ಸವ - 2023ರ ಅಂಗವಾಗಿ ಹೊರ ತರಲಾದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್, ಶಾಸಕ ರಹೀಮ್ ಖಾನ್, ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮೂಳೆ, ಹುಮನಾಬಾದ ಶಾಸಕರಾದ ರಾಜಶೇಖರ ಬಿ.ಪಾಟೀಲ, ಭಾಲ್ಕಿ ಶಾಸಕರಾದ ಈಶ್ವರ ಬಿ.ಖಂಡ್ರೆ, ಬೀದರ್ ದಕ್ಷಿಣ ಶಾಸಕರಾದ ಬಂಡೆಪ್ಪ ಖಾಶೆಂಪೂರ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : Watch: ಬೀದರ್ ಉತ್ಸವದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ