ಬಸವಕಲ್ಯಾಣ(ಬೀದರ್): ಕೊರೊನಾ ಭೀತಿಯಿಂದ ಲಾಕ್‌ಡೌನ್ ಜಾರಿ ನಡುವೆಯೂ ಬಾಲ್ಯ ವಿವಾಹಕ್ಕೆ ಮುಂದಾದ ಜೋಡಿಯೊಂದರ ವಿವಾಹ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲೂಕಿನ ಗ್ರಾಮವೊಂದರ 15 ವರ್ಷದ ಬಾಲಕಿಯನ್ನು ಅದೇ ಗ್ರಾಮದ 20 ವರ್ಷದ ಬಾಲಕನೊಂದಿಗೆ ಭಾನುವಾರ ಬೆಳಗ್ಗೆ ವಿವಾಹ ಮಾಡಲು ನಿಶ್ಚಯಿಸಲಾಗಿತ್ತು. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಬಂದ ದೂರವಾಣಿ ಕರೆ ಆಧಾರದ ಮೇಲೆ ಗ್ರಾಮಕ್ಕೆ ತೆರಳಿದ ಅಧಿಕಾರಿಗಳ ತಂಡ, ಎರಡೂ ಕುಟುಂಬದವರಿಗೆ ತಿಳುವಳಿಕೆ ನೀಡುವ ಮೂಲಕ ಮದುವೆ ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸಿದ ಪಾಲಕರು ಹಾಗೂ ಸಂಬಂಧಿಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಈ ವೇಳೆ ಎಚ್ಚರಿಸಿದ್ದಾರೆ. ಅಂಗನವಾಡಿ ಮೇಲ್ವಿಚಾರಕಿ ಮಂಗಲಾ ಕಾಂಬಳೆ, ಮಂಠಾಳ ಎಎಸ್‌ಐ ಶಿವರಾಜ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವಿಕ್ಷಣಾ ಅಧಿಕಾರಿ ವಿನೋದ ಕುರೆ, ಸಿಬ್ಬಂದಿ ನರಸಿಂಗ್ ಕರಾಳೆ, ಆಶಾ ಕಾರ್ಯಕರ್ತೆ ಅಶ್ವಿನಿ ದೇಶಮುಖ, ಅಂಗನವಾಡಿ ಕಾರ್ಯಕರ್ತೆ ಮಹಾದೇವಿ, ಮಹಿಳಾ ಪೊಲೀಸ್ ಪೇದೆ ರೂಪಾಲಿ ಲಾಖೆ ದಾಳಿಯಲ್ಲಿ ಭಾಗವಹಿಸಿದ್ದರು.