ಬೀದರ್: ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದ ಕಿರ್ಗಿಸ್ತಾನದ 8 ಪ್ರಜೆಗಳು ವೀಸಾ ನಿಯಮ ಉಲ್ಲಂಘಿಸಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಆರೋಪದ ಮೇಲೆ ಬೀದರ್ ನಗರದ ಎರಡು ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾರ್ಚ್ 10 ರಂದು ಕಿರ್ಗಿಸ್ತಾನದಿಂದ ಪ್ರವಾಸಿ ವೀಸಾ ಪಡೆದು 8 ಜನರು ಭಾರತಕ್ಕೆ ಬಂದಿದ್ದಾರೆ. ಮಾರ್ಚ್ 15 ರಂದು ಈ 8 ಜನರ ಪೈಕಿ ಕಿರ್ಗಿಸ್ತಾನ್ ದೇಶದ ನಿವಾಸಿ ತಸ್ಮೋತೊ ತಿಲೇಕ್ ಎಂಬಾತ ಬೀದರ್ ನಗರದಲ್ಲಿ ವಾಸ್ತವ್ಯ ಮಾಡಿ ಧರ್ಮ ಪ್ರಚಾರ ಮಾಡಿರುವುದನ್ನು ಸ್ಥಳೀಯ ಪೊಲೀಸರು ಗಮನಿಸಿ ವಿಚಾರಣೆ ಮಾಡಿದಾಗ ವೀಸಾ ನಿಯಮ ಉಲ್ಲಂಘನೆಯಾಗಿರುವುದು ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆ ಮಾಡಿದಾಗ ಒಟ್ಟು ಎಂಟು ಜನರು ಹೀಗೆ ಬಂದಿದ್ದು ಎಲ್ಲರೂ ವೀಸಾ ನಿಯಮ ಉಲ್ಲಂಘನೆ ಮಾಡಿರುವುದು ಬಯಲಾಗಿದೆ.
ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು. ಈ ಎಂಟು ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ನಾಗರಿಕರ ಮೇಲೆ ತೀವ್ರ ನಿಗಾ ಇಟ್ಟಿರುವ ಪೊಲೀಸರ ಈ ಕ್ರಮದಿಂದ ವೀಸಾ ನಿಯಮ ಉಲ್ಲಂಘನೆ ಬಯಲಿಗೆ ಬಂದಂತಾಗಿದೆ.