ಬೀದರ್: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗ ಬಿಜೆಪಿ ನಾಯಕರಿಗೆ ಜನರ ಜೀವಕ್ಕಿಂತ ಚುನಾವಣೆಯಲ್ಲಿ ಮತ ಗಳಿಸುವುದೇ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕೊರೊನಾ ವರದಿ ಸರ್ಕಾರದ ಮುಂದೆಯೇ ಇದೆ. ಹೀಗಿದ್ದರೂ ಬಿಜೆಪಿ ನಾಯಕರು ಕೇವಲ ಮತಗಳಿಕೆಯ ಉದ್ದೇಶದಿಂದ ರೋಡ್ ಷೋ ನಡೆಸುವುದನ್ನು ನೋಡಿದರೆ ನಿಜವಾಗಲೂ ಆಶ್ಚರ್ಯವಾಗುತ್ತದೆ. ಈಗಲೂ ಸಾಮಾಜಿಕ ಅಂತರವನ್ನು ಮರೆತಿರುವ ನಾಯಕರು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದನ್ನು ಇವರ ನಡವಳಿಕೆಯಿಂದ ನಾನು ನೋಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಬಹಿರಂಗ ಸಮಾವೇಶ ನಿರ್ಬಂಧ ಮಾಡಿಕೊಂಡಿದೆ. ಆದರೆ ಬಿಜೆಪಿ ಬಸವಕಲ್ಯಾಣದಲ್ಲಿ ಮತ್ತೆ ರೋಡ್ ಷೋ ಮಾಡುವುದಕ್ಕೆ ಹೊರಟಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸದ್ಯದ ಕೊರೊನಾ ಸ್ಥಿತಿ ನೋಡಿದ್ರೆ ಇಲ್ಲಿನ ಜನರನ್ನು ದೇವರೇ ಕಾಪಾಡಬೇಕು ಎಂದರು.
ಕೊರೊನಾ ಏರಿಕೆಯ ಸಂದರ್ಭದಲ್ಲಿ ತಜ್ಞರು ನೀಡಿದ ವರದಿಯನ್ನು ಗಮನಕ್ಕೆ ತೆಗೆದುಕೊಳ್ಳದೇ, ಸೋಂಕಿನ ನಿಯಂತ್ರಣಕ್ಕೆ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದೇ ಈಗ ಸರ್ವ ಪಕ್ಷಗಳ ಸಭೆ ಕರೆದು ಆಗಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಓದಿ: ಎರಡು ಚೀಲದಲ್ಲಿ ಹಣ ತಂದಿದ್ರು, ಒಂದು ಚೀಲ ಪಿಎಸ್ಐ ತೆಗೆದುಕೊಂಡು ಹೋಗಿದ್ದಾರೆ: ಡಿಕೆಶಿ ಆರೋಪ