ಬೀದರ್: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ ಜಿಲ್ಲೆಯ ಔರಾದ್ ತಾಲೂಕಿನ ಹುಕ್ಯಾಳ ತಾಂಡದ ಯುವಕ ಅಪಹರಣಕ್ಕೊಳಗಾಗಿದ್ದ ಘಟನೆ ಬೆಳಕಿಗೆ ಬಂದಿದೆ.
ಹುಲ್ಯಾಳ ತಾಂಡಾದ 21 ವರ್ಷದ ಅಜಯ್ ರಾಠೋಡ್ ಡಿಸೆಂಬರ್ 14ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ. ಜನವರಿ 16ರಂದು ಅಜಯ್ನನ್ನು ಅಪಹರಿಸಿದ ದುಷ್ಕರ್ಮಿಗಳು, ಹುಲ್ಯಾಳ ತಾಂಡದಲ್ಲಿರುವ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಮಾಡಿದ್ದರು. ಯುವಕನ ಸಂಬಂಧಿಕರು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ.
ದುಷ್ಕರ್ಮಿಗಳು ಆ ಬಳಿಕ ಅಜಯ್ನನ್ನು ಕಿರ್ಗಿಸ್ತಾನ್ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿನಿಸ್ತಾನ ಗಡಿಯಲ್ಲಿ ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನ ಕಟ್ಟಿ ಹಾಕಿರುವ ಫೋಟೋ ರವಾನಿಸಿದ್ದಾರೆ. ಎರಡು ಬಾರಿ ವಿಡಿಯೋ ಕಾಲ್ ಮೂಲಕ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ.
ಓದಿ: ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಬೈಕ್, ಹಣ ಕಿತ್ತು ಪರಾರಿಯಾದ ಬಾಲಕರು
ಇದಾದ ನಂತರ ಜಿಲ್ಲಾ ಪೊಲೀಸರು, ಭಾರತ ರಾಯಭಾರಿ ಕಚೇರಿ ಅಧಿಕಾರಿಗಳ ಸಹಕಾರದಿಂದ ಉಕ್ರೇನ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಕಷ್ಟದಲ್ಲಿದ್ದ ಯುವಕನನ್ನು ರಕ್ಷಿಸಿದ್ದಾರೆ. ಕೆಲವೇ ದಿನಗಳಲ್ಲಿ ಅಜಯ್ ಭಾರತಕ್ಕೆ ಮರಳಲಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.