ಬೀದರ್: ರೈತ ಸಮುದಾಯದ ಸಾಂಪ್ರದಾಯಿಕ ಜೋಡೆತ್ತುಗಳ ಹೊಳ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ಘಮಸುಬಾಯಿ ತಾಂಡದಲ್ಲಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮ ದೇವತೆಗೆ ಸರತಿ ಸಾಲಿನಲ್ಲಿ ಶೃಂಗಾರಗೊಂಡ ಎತ್ತುಗಳ ಮೆರವಣಿಗೆ ನಡೆಸಿದರು.
ಎತ್ತುಗಳೊಂದಿಗೆ ರೈತರ ಸಂಭ್ರಮ:
ಹೊಳ ಹಬ್ಬದ ನಿಮಿತ್ತ ಅನ್ನದಾತನ ಬೆನ್ನೆಲುಬಾದ ಎತ್ತುಗಳಿಗೆ ಇಂದು ಭಾಸಿಂಗ ಕಟ್ಟಿ, ಮೈ ಮೇಲೆ ಹೊಸ ಬಟ್ಟೆ(ಜೂಲಾ) ಹಾಕಿ ಬಣ್ಣಗಳಿಂದ ಅಲಂಕೃತಗೊಳಿಸಿ, ಕೊರಳಿಗೆ ಹಗ್ಗಗಳಿಂದ ಶೃಂಗಾರಗೊಳಿಸಿ, ಬೆಲ್ಲದ ನೀರು ಕುಡಿಸಿ, ರೈತ ಸಮುದಾಯ ಮನೆಯಲ್ಲಿ ಹೋಳಿಗೆ ಊಟ ಮಾಡಿ ಸಂಭ್ರಮದಿಂದ ಸಾಮರಸ್ಯ ಸಾರುವ ಸಾಂಪ್ರದಾಯಿಕ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಔರಾದ್ನಲ್ಲಿ ಸಂಭ್ರಮದ ಹೋಳ:
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಹೊಳ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಅಮರೇಶ್ವರ ದೇವಸ್ಥಾನದಿಂದ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆಯಲ್ಲಿ ಎತ್ತುಗಳ ಶೃಂಗಾರ ಹಾಗೂ ಮೈಕಟ್ಟು ಪ್ರದರ್ಶನದಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ರೈತರಿಗೆ ಸ್ಥಳೀಯ ಮುಖಂಡರಾದ ಕಲ್ಲಪ್ಪ ದೇಶಮುಖ ಅವರಿಂದ ಬಹುಮಾನ ವಿತರಿಸಲಾಯಿತು.