ಬಸವಕಲ್ಯಾಣ: ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಜನತಾ ಕರ್ಫ್ಯೂಗೆ ನಗರ ಸೇರಿದಂತೆ ತಾಲೂಕಿನಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ನಗರದ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ಓಣಿ, ಬಡಾವಣೆಗಳು ಜನರಿಲ್ಲದೆ ನಿಶಬ್ದವಾಗಿದ್ದವು. ನಗರದ ಮಡಿವಾಳ ವೃತ್ತ, ಹರಳಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ ಹಾಗೂ ಸಸ್ತಾಪೂರ ಬಂಗ್ಲಾ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕರ್ತದಲ್ಲಿದ್ದ ಪೊಲೀಸರು ರಸ್ತೆಗೆ ಬರುತ್ತಿದ್ದ ಬೈಕ್ ಸವಾರರನ್ನು ವಿಚಾರಿಸಿ ಬಿಡುತ್ತಿದ್ದರು. ಆಸ್ಪತ್ರೆ ಸೇರಿದಂತೆ ಅವಶ್ಯಕ ಕೆಲಸಗಳಿಗೆ ತೆರಳುವವರನ್ನು ಮಾತ್ರ ಬಿಡಲಾಗುತ್ತಿತ್ತು.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಾವಿತ್ರಿ ಸಲಗರ ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ, ಹುಮನಾಬಾದ ಡಿವೈಎಸ್ಪಿ ಮಹೇಶ್ವರಪ್ಪ ಅವರು ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.