ಬೀದರ್: ಮೂರು ವರ್ಷಗಳಿಂದ ಮಂಜೂರಾದ ನ್ಯಾಯಾಲಯದ ನೂತನ ಕಟ್ಟಡಕ್ಕಾಗಿ ಗುರುತಿಸಲಾದ ಸ್ಥಳವನ್ನು ವಿಲೇವಾರಿ ಮಾಡದೇ, ನಿರ್ಲಕ್ಷ್ಯ ವಹಿಸಿದ ತಹಶೀಲ್ದಾರ್ ಮೇಲೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹೊಸದಾಗಿ ಮಂಜೂರಾದ 13 ಕೋಟಿ ರೂ. ವೆಚ್ಚದ ನೂತನ ನ್ಯಾಯಾಲಯ ಕಾಮಗಾರಿ, ಭೂ ಪರಿವರ್ತನೆ ಮಾಡದಕ್ಕೆ ವಿಳಂಬವಾಗಿದೆ. ವಿಷಯ ತಿಳಿದ ಸಚಿವ ಪ್ರಭು ಚವ್ಹಾಣ ಅವರು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ, ನ್ಯಾಯಾಲಯದ ಉಸ್ತುವಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಇದೇ ವೇಳೆ ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಅವರನ್ನು ಕರೆಯಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಔರಾದ್ ಜತೆಯಲ್ಲೇ ಭಾಲ್ಕಿ ಪಟ್ಟಣದ ಕಟ್ಟಡ ಕಾಮಗಾರಿ ಕೂಡ ಇತ್ತು. ಆದ್ರೆ ಅದು ಮುಗಿದು ಹೋಗಿದೆ. ಸರ್ಕಾರಿ ಭೂಮಿಯನ್ನೇ ನ್ಯಾಯಾಲಯ ಕಟ್ಟಡ ಉದ್ದೇಶಕ್ಕಾಗಿ ವರ್ಗಾವಣೆ ಮಾಡಲಾಗದೆ ಮಂಜೂರಾದ ಅನುದಾನ ವಾಪಸ್ ಹೋಗುವ ಹಂತಕ್ಕೆ ತಲುಪಿದೆ. ನಿಮ್ಮಿಂದ ಕೆಲಸ ಮಾಡಲಿಕ್ಕೆ ಆಗೊಲ್ಲ ಅಂದ್ರೆ ಹೇಳಿ, ನಾವು ಒಂದೊಂದು ಯೋಜನೆಯನ್ನು ಎಷ್ಟು ಕಷ್ಟಪಟ್ಟು ಮಂಜೂರು ಮಾಡಿಸುತ್ತೇವೆ. ಆದ್ರೆ ನಿಮ್ಮಂತ ಅಧಿಕಾರಿಗಳಿಂದಾಗಿ ಜನಪ್ರತಿನಿಧಿಗಳು ಜನರಿಂದ ನಿಂದನೆಗೆ ಒಳಗಾಗುವ ಸಂದರ್ಭ ಬರ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.