ಬೀದರ್: ವರ್ಷದ ಆರಂಭದಲ್ಲಿ ಕೊರೋನಾ ಮಹಾಮಾರಿ ತಗ್ಗಿರುವ ಖುಷಿ ಇರುವಾಗಲೇ ಅತಿವೃಷ್ಟಿ ಸಂಕಷ್ಟ ಅನ್ನದಾತರ ನೆಮ್ಮದಿ ಕಸಿದಿದೆ. 2022ನೇ ವರ್ಷ ಬೀದರ್ ಜಿಲ್ಲೆಗೆ ಸಿಹಿಗಿಂತ ಕಹಿಯೇ ಹೆಚ್ಚು ಕೊಟ್ಟಿದೆ. ಈ ಮುಂಗಾರಿನಲ್ಲಿ ಸುರಿದ ಭಾರಿ ಮಳೆ ಜಿಲ್ಲೆಯ ಅನ್ನದಾತರಿಗೆ ಸಮಸ್ಯೆ ತಂದಿಟ್ಟಿತು. ವ್ಯಾಪಕ ಮಳೆಯಿಂದ ಸಮೃದ್ಧವಾಗಿ ಬಂದಿದ್ದ ಒಂದು ಲಕ್ಷಕ್ಕೂ ಅಧಿಕ ಎಕರೆಯಲ್ಲಿನ ವಿವಿಧ ಬೆಳೆಗಳು ನೀರುಪಾಲಾಯಿತು.
ಅಳಿದುಳಿದ ತೊಗರಿ ಮೇಲೆ ಆಸೆ ಇಟ್ಟಿದ್ದ ರೈತರಿಗೆ ಮಳೆ ಗಾಯದ ಮೇಲೆ ಬರೆ ಎಳೆದಿದೆ. ನೆಟೆ ರೋಗದಿಂದ 10 ಸಾವಿರ ಹೆಕ್ಟೇರ್ಗೂ ಅಧಿಕ ತೊಗರಿ ಹಾನಿಯಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಪ್ರಭು ಚವ್ಹಾಣ್ ಅವರನ್ನು ಬದಲಾಯಿಸಿ ಹೊರ ಜಿಲ್ಲೆಯವರಾದ ಶಂಕರ ಪಾಟೀಲ್ ಮುನೇನಕೊಪ್ಪಗೆ ಬೀದರ್ ಹೊಣೆ ವಹಿಸಲಾಗಿದೆ. ಜನವರಿಯಲ್ಲಿ ಅಧಿಕಾರಿ ವಹಿಸಿಕೊಂಡು ನಂತರ ಬೆರಳೆಣಿಕೆಯಷ್ಟು ಬಾರಿ ಪಾಟೀಲ್ ಇಲ್ಲಿಗೆ ಭೇಟಿ ನೀಡಿದ್ದಾರೆ.
ಬೀದರ್ ಜಿಲ್ಲೆ ಮಟ್ಟಿಗೆ 2022 ಒಂದಿಷ್ಟು ಹಿತಕರ ಎನಿಸಿದೆ. ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ನೀರಾವರಿ, ಕೆಲ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಭರಪೂರ ಅನುದಾನ ಒದಗಿಸಿದೆ. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಕಾಮಗಾರಿಗೆ ಚಾಲನೆ ನೀಡಿದ್ದು, 612 ಕೋಟಿ ರೂ. ಯೋಜನೆ ಇದಾಗಿದೆ. 90 ಕೋಟಿ ರೂ. ವೆಚ್ಚದಲ್ಲಿ ಸಿಪೆಟ್ ಯೋಜನೆಗೆ ಔರಾದ್ ತಾಲೂಕಿನ ಬಲ್ಲೂರ್‍ನಲ್ಲಿ ಸಿಎಂ ಚಾಲನೆ ನೀಡಿದ್ದಾರೆ.
ಔರಾದ್ ತಾಲೂಕಿನ ಬಳತ (ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್ ಮೇಲ್ಬಾಗದಲ್ಲಿ ಮಾಂಜ್ರಾ ನದಿಯ 0.95 ಟಿಎಂಸಿ ನೀರಿನಿಂದ 36 ಕೆರೆ ತುಂಬಿಸುವ 560.70 ಕೋಟಿ ರೂ. ಯೋಜನೆ ಮತ್ತು ಭಾಲ್ಕಿ ತಾಲೂಕಿನ ಜೀರಗ್ಯಾಳ ಬ್ಯಾರೇಜ್ ಮೇಲ್ಬಾಗದಲ್ಲಿ ಮಾಂಜ್ರಾ ನದಿಯ 0.95 ಟಿ.ಎಂ.ಸಿ ನೀರಿನಿಂದ 12 ಗ್ರಾಮಗಳ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 762 ಕೋಟಿ ರೂ. ಮೇಹಕರ್ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮಹತ್ವದ ಘಟನೆ: . ಉಸ್ತುವಾರಿ ಸಚಿವರ ಬದಲಾವಣೆ, ಪ್ರಭು ಚವ್ಹಾಣ್ ಸ್ಥಾನಕ್ಕೆ ಶಂಕರ ಪಾಟೀಲ್ ಮುನೇನಕೊಪ್ಪ ನೇಮಿಸಿ ಆದೇಶ. ನೂತನ ಎಸ್ಪಿಯಾಗಿ ಡೆಕ್ಕಾ ಕಿಶೋರಬಾಬು ನೇಮಕ. ಮರಾಠ ಅಭಿವೃದ್ಧಿ ನಿಗಮಕ್ಕೆ ಮಾಜಿ ಶಾಸಕ ಎಂ.ಜಿ ಮುಳೆ ನೇಮಕ. ಉಕ್ರೇನ್‍ನಲ್ಲಿ ಸಿಲುಕಿದ ಜಿಲ್ಲೆಯ 6 ವೈದ್ಯ ವಿದ್ಯಾರ್ಥಿಗಳು ಆಪರೇಷನ್ ಗಂಗಾ ಮೂಲಕ ತಾಯ್ನಾಡಿಗೆ ವಾಪಸ್. ಔರಾದ್ ತಾಲೂಕಿನ ವಡಗಾಂವ್ ಗ್ರಾಮದಲ್ಲಿ ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮ. ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಹೂಡಿದ್ದರು. ರಸಗೊಬ್ಬರ ವಿಷಯಕ್ಕಾಗಿ ಕೇಂದ್ರ ರಸಾಯನಿಕ-ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ತವರು ಕ್ಷೇತ್ರದ ರೈತರೊಂದಿಗೆ ಉಡಾಫೆಯಾಗಿ ಮಾತನಾಡಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿತ್ತು.
ಬೀದರ್ನಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಸಮಾಲೋಚನೆ ಹಾಗೂ ಚುನಾವಣೆ ಪೂರ್ವ ಸಿದ್ಧತಾ ಸಭೆ, ಮಾಜಿ ಸಿಎಂ ಕುಮಾರಸ್ವಾಮಿ ಭಾಗಿ. ಹುಮನಾಬಾದ್ ಆರ್ಟಿಒ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ. ಔರಾದ್, ಹುಮನಾಬಾದ್‍ನಲ್ಲಿ ಜನಸಂಕಲ್ಪ ಯಾತ್ರೆ. ಡಿಸೆಂಬರ್ನಲ್ಲಿ 18 ದಿನ ಬೀದರ್ನಲ್ಲಿ ಭಾರತೀಯ ಸೇನಾ ರ್ಯಾಲಿ ಆಯೋಜನೆ ಈ ವರ್ಷದ ಪ್ರಮುಖ ಘಟನೆಯಾಗಿದೆ.
ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ಮೀಸಲಾತಿ ಅಸ್ತ್ರ: ಪ.ಜಾತಿಯ ಒಳ ಮೀಸಲಾತಿಯ ಒಳಸುಳಿ ಹೇಗಿದೆ?