ಬೀದರ್: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಇಲ್ಲಿನ ಕೋಟೆ ಆವರಣದಲ್ಲಿ ಜನವರಿ 7 ರಿಂದ ಮೂರು ದಿನಗಳ ಕಾಲ ಬೀದರ್ ಉತ್ಸವ ಆಯೋಜಿಸಲಾಗಿದೆ. ಉತ್ಸವಕ್ಕೆ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಉತ್ಸವದ ನಿಮಿತ್ತ ನಗರ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ನಗರದ ಐತಿಹಾಸಿಕ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಶುಕ್ರವಾರ ತಿಳಿಸಿದರು.
ಕಳೆದ ಎಂಟು ವರ್ಷಗಳಿಂದ ನಾನಾ ಕಾರಣಗಳಿಂದ ಸ್ಥಗಿತಗೊಂಡಿದ ಉತ್ಸವವನ್ನು ಈ ವರ್ಷ ಮತ್ತೆ ಆರಂಭಿಸಲಾಗಿದೆ. ಉತ್ಸವ ನಿಮಿತ್ತ ನಗರದ ವಿವಿಧ ರಸ್ತೆ, ಚರಂಡಿಗಳನ್ನು ಸುಧಾರಣೆ ಕೈಗೆತ್ತಿಕೊಳ್ಳಲಾಗಿದೆ. 90 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿವೆ. ನಗರದ ರಸ್ತೆ ಬದಿಯಲ್ಲಿರುವ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆ ಜತೆಗೆ ಶಾಲೆಗಳ ಗೋಡೆಗಳ ಮೇಲೆ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನ ಬಿಡಿಸಲಾಗುತ್ತಿದೆ. ಇದರ ಮೂಲಕ ಜಿಲ್ಲೆಯ ಮಕ್ಕಳಿಗೆ ಇಲ್ಲಿನ ಇತಿಹಾಸದ ಬಗ್ಗೆ ತಿಳಿಸುವ ಪ್ರಯತ್ನವನ್ನ ಇಲ್ಲಿ ಮಾಡಲಾಗುತ್ತಿದೆ ಎಂದರು.
ಜನವರಿ 7ರಂದು ಸಂಜೆ 5.30ಕ್ಕೆ ಕೇಂದ್ರದ ಸಚಿವ ಕಿಶನ್ ರಡ್ಡಿ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಬೀದರ್ ಉತ್ಸವದಲ್ಲಿ ಸಂಜೀತ್ ಹೆಗಡೆ, ಮಂಗಲಿ, ಅನುರಾಧ ಭಟ್, ವೀರ ಸಮರ್ಥ ತಂಡ, ವಿಜಯಪ್ರಕಾಶ, ಕುಮಾರ ಸಾನು ತಂಡ ಕನ್ನಡ ಹಾಗೂ ಹಿಂದಿಯ ವಿವಿಧ ಕಲಾವಿದರು ಭಾಗವಹಿಸಿ ಜನರನ್ನ ರಂಜಿಸಲಿದ್ದಾರೆ.
ಖ್ಯಾತ ಚಿತ್ರ ನಟರಾದ ಕಿಚ್ಚ ಸುದೀಪ್, ಶಿವರಾಜ್ಕುಮಾರ, ಡಾಲಿ ಧನಂಜಯ ಇತರರು ಪಾಲ್ಗೊಳ್ಳಲಿದ್ದಾರೆ. ಇದರ ಜತೆಗೆ ಮೂರು ದಿನಗಳ ಕಾಲ ವಿವಿಧ ಸ್ಫರ್ಧೆಗಳು ಕೂಡ ನಡೆಯಲಿದ್ದು, ಪ್ರಮುಖವಾಗಿ ಮ್ಯಾರಾಥಾನ್ ಉತ್ಸವ, ಕ್ರೀಡಾ ಉತ್ಸವ, ಕುಸ್ತಿ, ಚಿತ್ರ ಕಲಾ ಉತ್ಸವ, ಗಾಳಿ ಪಟ ಉತ್ಸವ, ಏರ್ ಶೋ, ಪಶು ಮೇಳ, ರೈತ ಉತ್ಸವ, ಸಿಡಿ ಮದ್ದು ಉತ್ಸವ, ಉದ್ಯೋಗ ಮೇಳ, ಮಕ್ಕಳ ಆಟದ ಉತ್ಸವ, ಜಲೋತ್ಸವ, ವನ್ಯ ಜೀವಿ ಉತ್ಸವ, ಗಡಿನಾಡು ಕನ್ನಡಿಗರ ಉತ್ಸವಗಳು ನಡೆಯಲಿದೆ. ಉತ್ಸವದ ಸಮಾರೋಪ ದಿನವಾದ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ ಎಂದು ಬಾಬು ವಾಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಂದ ಆಹ್ವಾನ: ’’ಬೀದರ್ ಉತ್ಸವ ಈ ಬಾರಿ ಅದ್ಧೂರಿಯಾಗಿ ಆಯೋಜನೆ ಆಗಿದೆ. ಸುಮಾರು ವರ್ಷಗಳ ಕಾಲ ನಿಂತು ಹೋಗಿತ್ತು. ಹಾಗಾಗಿ ಐತಿಹಾಸಿಕ ಮತ್ತು ಪಾರಂಪರಿಕ ನಡಿಗೆಯೊಂದಿಗೆ ಉತ್ಸವ ಈಗಾಗಲೇ ಆರಂಭಗೊಂಡಿದೆ. ಇಂದು ನಡೆದ ಈ ನಡಿಗೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 30 ಸಾವಿರ ಸಾರ್ವಜನಿಕರು ಪಾಲ್ಗೊಂಡಿದ್ದರು. ನಾಳೆ ಉತ್ಸವದ ಉದ್ಘಾಟನೆ ಆಗಲಿದೆ. ಒಟ್ಟು 25 ಉತ್ಸವಗಳು ಈ ಹಬ್ಬದಲ್ಲಿ ಪಾಲ್ಗೊಳ್ಳಲಿವೆ. ನಾಡಿನ ಎಲ್ಲ ಕಲಾವಿದರು ಸಹ ಈ ಉತ್ಸವಕ್ಕೆ ಸಾಕ್ಷಿ ಆಗಲಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರ ಮತ್ತು ಜಿಲ್ಲಾಡಳಿತದ ವತಿಯಿಂದ ಈ ಸಾರಿಯ ಬೀದರ್ ಉತ್ಸವವು ಇತಿಹಾಸ ಸೃಷ್ಟಿ ಮಾಡುವಲ್ಲಿ ಸಾಗುತ್ತಿದೆ. ಎಲ್ಲರೂ ಪಾಲ್ಗೊಳ್ಳಿ‘‘ - ಬಾಬು ವಾಲಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
ಇದನ್ನೂ ಓದಿ: ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಇತಿಹಾಸ ಹೀಗಿದೆ!