ಬೀದರ್: ಕೊರೊನಾ ಅಂಕಿ ಅಂಶ ಹಾಗೂ ಸಮರ್ಪಕ ಮಾಹಿತಿ ರವಾನಿಸುವಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಡವಟ್ಟು ಮಾಡಿಕೊಂಡಿದ್ದು, ಸಾವಿನ ಸಂಖ್ಯೆ ಹಾಗೂ ಒಂದು ವಾರದ ಹಿಂದಿನ ಪ್ರಕಟಣೆ ದಿನಾಂಕ ನಮೂದಿಸಿರುವುದು ಕಂಡು ಬಂದಿದೆ.
ಇಂದಿನ ಜಿಲ್ಲಾ ಬುಲೆಟಿನ್ನಲ್ಲಿ ನಾಲ್ಕು ಸಾವು, 25 ಜನರಿಗೆ ಸೋಂಕು ತಗುಲಿರುವ ಮಾಹಿತಿ ನೀಡಲಾಗಿದೆ. ಆದ್ರೆ ಅನುಬಂಧ 3 ರಲ್ಲಿ ಇಂದಿನ ಸಾವು 08 ಎಂದು ನಮೂದಿಸಲಾಗಿದ್ದು, ದಿನಾಂಕ 14-07-2020 ಎಂದು ಉಲ್ಲೇಖಿಸಿರುವುದು ಬುಲೆಟಿನ್ ಸಿದ್ಧಪಡಿಸುವ ಅಧಿಕಾರಿಯ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ತಾರಕಕ್ಕೇರಿದ್ದು ಸೋಂಕಿತರು, ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಮಾಹಿತಿ ನೀಡಬೇಕಾದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಸಾರ್ವಜನಿಕ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ.
ಸಾಮಾನ್ಯ ತಪ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಡಳಿತದ ತಂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ವಿಷಯವನ್ನು ಖುದ್ದಾಗಿ ಪರಿಶೀಲನೆ ಮಾಡಲಾಗುತ್ತದೆ. ಆದ್ರೆ ಇಂದು ನಮ್ಮ ಗಮನಕ್ಕೆ ಬಾರದೆ ಇಂಥ ಪ್ರಮಾದ ಆಗಿದೆ. ಆಗಿರುವ ಎಡವಟ್ಟನ್ನು ಸರಿಪಡಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಾಗಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು 'ಈಟಿವಿ ಭಾರತ್'ಕ್ಕೆ ತಿಳಿಸಿದ್ದಾರೆ.